ಸರ್ಕಾರ ಪತನ ಬಿಜೆಪಿ ಕನಸು : ಖರ್ಗೆ ಟೀಕೆ

ಬೆಂಗಳೂರು, ಸೆ. ೧೨- ರಾಜ್ಯದ ಸಮ್ಮಿಶ್ರ ಸರ್ಕಾರದ ಪತನದ ಬಗ್ಗೆ ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಸದಾಶಿವನಗರದ ತಮ್ಮ ನಿವಾಸದಲ್ಲಿಂದು ಸಚಿವ ಜಾರಕಿಹೊಳಿ ಭೇಟಿಗೂ ಮುನ್ನ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರ ಪತನವಾಗುತ್ತದೆ. ನಾವು ಅಧಿಕಾರಕ್ಕೆ ಬರಬಹುದು ಎಂಬುದು ಬಿಜೆಪಿ ನಾಯಕರ ಹಗಲುಗನಸು ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಪಕ್ಷದಲ್ಲಿ ಜಾರಕಿಹೊಳಿ ಸಹೋದರರು ಗೊಂದಲ ಸೃಷ್ಟಿಸುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಜಾರಕಿಹೊಳಿ ಸಹೋದರರ ಜೊತೆ ಚರ್ಚೆ ನಡೆಸುವುದಾಗಿಯೂ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದರು.

ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಸರ್ಕಾರ ಭದ್ರವಾಗಿದೆ. ಜಾರಕಿಹೊಳಿ ಸಹೋದರರ ಜೊತೆ ಚರ್ಚೆ ನಡೆಸಿ, ಸಮಸ್ಯೆಗಳಿದ್ದರೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದರು.

ಜಾರಕಿಹೊಳಿ ಸಹೋದರರು ಸುಮಾರು ವರ್ಷಗಳಿಂದ ಪಕ್ಷದಲ್ಲಿದ್ದಾರೆ. ಸದ್ಯಕ್ಕೆ ಯಾವುದೇ ಗೊಂದಲಗಳಿಲ್ಲ. ಗೊಂದಲಗಳಿದ್ದರೆ ಅವರನ್ನು ಕರೆದು ಚರ್ಚಿಸಿ, ಪರಿಹಾರ ಕಂಡುಕೊಳ್ಳಲಾಗುವುದು. ಸುಖಾಸುಮ್ಮನೆ ಮಾಧ್ಯಮಗಳು ಈ ವಿಷಯವನ್ನು ವೈಭವೀಕರಿಸುತ್ತಿವೆ ಇದು ಸರಿಯಲ್ಲ ಎಂದು ಹೇಳಿದರು.

ಭೇಟಿ ಚರ್ಚೆ

ಇದಾದ ಬಳಿಕ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ನಿವಾಸದಲ್ಲಿ ಸಚಿವ ರಮೇಶ್ ಜಾರಕಿಹೊಳಿ ಜೊತೆ ರಾಜಕೀಯ ಆಗು ಹೋಗುಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಸರ್ಕಾರ ಹಾಗೂ ಪಕ್ಷಕ್ಕೆ ಯಾವುದೇ ತೊಂದರೆಯಾಗುವ ತೀರ್ಮಾನ ಕೈಗೊಳ್ಳಬೇಡಿ ಎಂದು ಸಲಹೆ ಮಾಡಿದರು ಎನ್ನಲಾಗಿದೆ.

Leave a Comment