ಸರ್ಕಾರ ನಿಭಾಯಿಸಲಾಗದ ಯಡಿಯೂರಪ್ಪ ದಿಕ್ಕು ತಪ್ಪಿದ ಮಗನಂತಾಗಿದ್ದಾರೆ: ನಾಡಗೌಡ

ಬೆಂಗಳೂರು, ಅ 10- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರವನ್ನು ನಿಭಾಯಿಸಲಾಗದೆ ದಿಕ್ಕು ತಪ್ಪಿದ ಮಗನಂತಾಗಿದ್ದಾರೆ ಎಂದು ಮಾಜಿ ಸಚಿವ ವೆಂಕಟರಾವ್ ನಾಡಗೌಡ ಆರೋಪಿಸಿದ್ದಾರೆ.

ಜೆ.ಪಿ.ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನೆರೆಯಿಂದ ಸಾಕಷ್ಟು ಹಾನಿಯುಂಟಾಗಿದ್ದು,‌ ರೈತರ ಬದುಕು ನಾಶವಾಗಿದೆ.‌ ಹೀಗಾಗಿ ದೇವೇಗೌಡರವರ ನೇತೃತ್ವದಲ್ಲಿ ಸರ್ಕಾರ ವೈಫಲ್ಯತೆ ಖಂಡಿಸಿ‌ ಪ್ರತಿಭಟನೆ ನಡೆಸುತ್ತಿದ್ದು, ಆ ಮೂಲಕ ಸರ್ಕಾರದ ಗಮನ ಸೆಳೆಯುತ್ತೇವೆ ಎಂದರು.

ಮೈತ್ರಿ ಸರ್ಕಾರ ಸಂದರ್ಭದಲ್ಲಿ ರಾಜ್ಯದಲ್ಲಿ ತಲೆದೋರಿದ್ದ ನೆರೆ ಪರಿಸ್ಥಿತಿಗೆ ಕೇಂದ್ರದಿಂದ ಈಗ ಅನುದಾನ  ಬಿಡುಗಡೆ ಆಗಿದೆ. ಕುಮಾರಸ್ವಾಮಿ ಸರ್ಕಾರದಲ್ಲಿ ಅನುದಾನ ಬಿಡುಗಡೆ ಮಾಡದೇ ಈಗ ಬಿಜೆಪಿ ಸರ್ಕಾರದಲ್ಲಿ ಬಿಡುಗಡೆ ಮಾಡಿದೆ.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ಗಮನಿಸಿದರೆ ಸರ್ಕಾರದಲ್ಲಿ ಏನೇನು ನಡೆಯುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ. ರೈತರ ಪರ ಮಾತಾಡಿದವರಿಗೆ ನೊಟೀಸ್ ನೀಡುತ್ತಿದ್ದಾರೆ. ಮೈತ್ರಿ ಸರ್ಕಾರದಲ್ಲಿನ ಯೋಜನೆಗಳಿಗೆ ತಡೆ ನೀಡಲಾಗಿದೆ. ತಮ್ಮ ಕ್ಷೇತ್ರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮಂಜೂರಾಗಿದ್ದ ನೂರು ಕೋಟಿ ರೂ. ಅನುದಾನ ನಿಲ್ಲಿಸಲಾಗಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಸರ್ಕಾರವನ್ನು  ಸರಿಯಾಗಿ ನಿಭಾಯಿಸಲು ಸಾಧ್ಯವಾಗದೇ ಅವರು ದಿಕ್ಕುತಪ್ಪುತ್ತಿದ್ದಾರೆ ಎಂದರು.

ವಿಪಕ್ಷ ಶಾಸಕರ ಕ್ಷೇತ್ರಗಳಿಗೆ ತಡೆಯೊಡ್ಡಿರುವ ಹಣವನ್ನ ಯಾರಿಗೆ ಕೊಟ್ಟಿದ್ದಾರೆ, ಎಲ್ಲಿಗೆ ಹೋಗುತ್ತಿದೆ ಎನ್ನುವ  ಮಾಹಿತಿಯೇ ಇಲ್ಲ .

ಇದರ ವಿರುದ್ಧ ಸದನದಲ್ಲಿ ಧ್ವನಿಯೆತ್ತಲಾಗುವುದು ಎಂದರು.

ಸದನದಲ್ಲಿ ವಿಪಕ್ಷಗಳ ಹೋರಾಟವನ್ನು ಎದುರಿಸಲಾಗದೆ  ಮಾಧ್ಯಮ ನಿರ್ಬಂಧ ಮಾಡಲಾಗಿದೆ. ಕಲಾಪವನ್ನು ಎದುರಿಸುವ ನೈತಿಕತೆ ಬಿಜೆಪಿಗೆ ಇಲ್ಲ ಎಂದು ಹರಿಹಾಯ್ದರು.

ಮೇಲ್ಮನೆ‌ ಸದಸ್ಯ  ಶರವಣ ಮಾತನಾಡಿ,‌ ಮುಖ್ಯಮಂತ್ರಿ ಯಡಿಯೂರಪ್ಪ ಒಮ್ಮೆ ತಂತಿ ಮೇಲಿನ ನಡಿಗೆ ಎನ್ನುತ್ತಾರೆ. ಅವರ ಶಾಸಕರ ಬಾಯಲ್ಲೇ ಸರ್ಕಾರ ಬೀಳಿಸುವ ಮಾತು ಕೇಳಿ ಬರುತ್ತಿದೆ. ತಂತಿ ತುಂಡಾಗಿ ಯಡಿಯೂರಪ್ಪ ಯಾವಾಗ ಬೀಳುತ್ತಾರೆಯೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

ಮಾಧ್ಯಮಗಳು ಪ್ರಜಾಪ್ರಭುತ್ವ ದ ಒಂದು ಅಂಗ. ಅಂದು ಎಚ್.ಡಿ. ಕುಮಾರಸ್ವಾಮಿ ಮಾಧ್ಯಮ ನಿರ್ಬಂಧ ಮಾಡಲು ಹೊರಟಾಗ ಯಡಿಯೂರಪ್ಪ ಏನು ಹೇಳಿದ್ದರು ? ಎನ್ನುವುದನ್ನು ಅವರು ಒಮ್ಮೆ ನೆನಪಿಸಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.

Leave a Comment