ಸರ್ಕಾರಿ ಸವಲತ್ತು ಸದ್ಬಳಕೆಗೆ ಕರೆ

ಗುಬ್ಬಿ, ಸೆ. ೭- ಸರ್ಕಾರಿ ಸವಲತ್ತುಗಳನ್ನು ಸದ್ಬಳಕೆ ಮಾಡುವ ಜವಾಬ್ದಾರಿ ಸಮುದಾಯದ ಮೇಲಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಯೋಜನೆ ಅನುಷ್ಠಾನದ ವೇಳೆ ಸಾರ್ವಜನಿಕರು ಮುತುವರ್ಜಿ ತೋರಬೇಕು ಎಂದು ಜಿ.ಪಂ. ಅಧ್ಯಕ್ಷೆ ಲತಾ ರವಿಕುಮಾರ್ ಹೇಳಿದರು.

ತಾಲ್ಲೂಕಿನ ಕಡಬದಲ್ಲಿ ನಿರ್ಮಾಣವಾದ ಸರ್ಕಾರಿ ಪಶು ಆಸ್ಪತ್ರೆಯ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಸರ್ಕಾರಿ ಕಚೇರಿಗಳು, ಕಟ್ಟಡಗಳು ನಿರೀಕ್ಷೆ ಮೀರಿ ಚೆನ್ನಾಗಿ ನಿರ್ಮಿಸಲಾಗುತ್ತಿದೆ. ಆದರೆ ಇದರ ನಿರ್ವಹಣೆ ಬಗ್ಗೆ ನೌಕರರು ನಿಗಾ ವಹಿಸಬೇಕು. ಸ್ಥಳೀಯ ಗ್ರಾಮ ಪಂಚಾಯಿತಿ ಸಹಕಾರದಲ್ಲಿ ಎಲ್ಲಾ ಸರ್ಕಾರಿ ಕಚೇರಿಯನ್ನು ಸ್ವಚ್ಚವಾಗಿಡುವ ಜತೆಗೆ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು ಎಂದರು.

ಜಾನುವಾರುಗಳು ರೈತನ ಕೃಷಿ ಚಟುವಟಿಕೆಗೆ ಮೂಲವಾಗಿದೆ. ಇದರ ಆರೋಗ್ಯ ಕಾಪಾಡುವುದು ರೈತನ ಕರ್ತವ್ಯವಾಗಿದೆ. ಈ ಹಿಂದೆ ಸಾಕಿದ ಜಾನುವಾರುಗಳಿಗೆ ಔಷಧೋಪಚಾರ ಮಾಡುವುದು ದುಸ್ಥರವಾಗಿತ್ತು. ಈ ಹಿನ್ನೆಲೆಯಲ್ಲಿ ದೊಡ್ಡ ಗ್ರಾಮಗಳಲ್ಲಿ ಸರ್ಕಾರಿ ಪಶು ಆಸ್ಪತ್ರೆಯನ್ನು ತೆರೆಯಲಾಗಿದೆ. ಜತೆಗೆ ಉತ್ತಮ ವೈದ್ಯರ ನೇಮಕ ಮಾಡಲಾಗಿದೆ. ರೈತರು ತಮ್ಮ ಪಶುಗಳನ್ನು ಕಾಪಾಡಿಕೊಳ್ಳಲು ಇಲ್ಲಿನ ಸವಲತ್ತು ಬಳಸಿಕೊಳ್ಳುವಂತೆ ಕರೆ ನೀಡಿದರು.

ಜಿ.ಪಂ. ಸದಸ್ಯ ಎಚ್.ಟಿ. ಕೃಷ್ಣಪ್ಪ ಮಾತನಾಡಿ, ಮಾದರಿ ಜಿಲ್ಲಾ ಪಂಚಾಯ್ತಿಯಾಗಿ ಕಡಬವನ್ನು ಮೇಲ್ಪಂಕ್ತಿಗೆ ತರಲು ಸತತ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಕೆಲ ತೊಡಕುಗಳು ರಾಜಕೀಯವಾಗಿ ಕಾಣಿಸಿಕೊಂಡಿದೆ. ಕೋಟ್ಯಂತರ ರೂ.ಗಳ ಹಲವು ಯೋಜನೆಯನ್ನು ಕಡಬ ಗ್ರಾಮಕ್ಕೆ ತರುವ ಯೋಚನೆ ಸಾಕಾರಗೊಳಿಸಲು ಸಾರ್ವಜನಿಕ ಸಹಕಾರ ಅಗತ್ಯವಿದೆ ಎಂದರು.

ಗ್ರಾ.ಪಂ. ಅಧ್ಯಕ್ಷೆ ಗೌರಮ್ಮ ಮಾತನಾಡಿ, ಕಡಬ ಗ್ರಾಮವು ತಾಲ್ಲೂಕಿನಲ್ಲಿ ದೊಡ್ಡ ಗ್ರಾಮವೆನಿಸಿದೆ. ಹೋಬಳಿ ಕೇಂದ್ರವಾದ ಕಡಬ ಗ್ರಾಮ ಪಂಚಾಯ್ತಿ ಕೂಡಾ ಹೊಂದಿದೆ. ಎಲ್ಲಾ ಸರ್ಕಾರಿ ಕಚೇರಿಗಳು ಇಲ್ಲಿವೆ. ಇದರ ನಿರ್ವಹಣೆಗೆ ಗ್ರಾಮ ಪಂಚಾಯಿತಿ ಸಂಪೂರ್ಣ ಸಹಕಾರ ನೀಡಲಿದೆ ಎಂದರು.

ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯೆ ಸುಧಾಮಣಿ, ಗ್ರಾ.ಪಂ. ಉಪಾಧ್ಯಕ್ಷ ವೆಂಕಟರಂಗಯ್ಯ, ಸದಸ್ಯರಾದ ದರ್ಶನ್, ನರಸಿಂಹಯ್ಯ, ದಯಾನಂದ್, ಯಶೋಧಮ್ಮ, ತಾ.ಪಂ. ಮಾಜಿ ಅಧ್ಯಕ್ಷ ಕೆ.ಎನ್. ಬಾಲಕೃಷ್ಣ, ಪಶು ಇಲಾಖಾ ಸಹಾಯಕ ನಿರ್ದೇಶಕ ಡಾ. ದೇವರಾಜು ಮತ್ತಿತರರು ಉಪಸ್ಥಿತರಿದ್ದರು.

Leave a Comment