ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಸ್ವಾಗತಕ್ಕೆ ಮೆಲಾನಿಯಾ ಟ್ರಂಪ್ ದಿಲ್ ಖುಷ್…!

ನವದೆಹಲಿ, ಫೆ 25- ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ದಿನಗಳ ಭಾರತ ಭೇಟಿಯ ಸಂದರ್ಭದಲ್ಲಿ ಅವರ ಪತ್ನಿ ಅಮೆರಿಕಾ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಮಂಗಳವಾರ ದೆಹಲಿಯ ಸರ್ಕಾರಿ ಶಾಲೆಗೆ ಭೇಟಿ ನೀಡಿ, ಅಲ್ಲಿ ನಡೆಸಲಾಗುತ್ತಿರುವ “ಹ್ಯಾಪಿನೆಸ್ ಕ್ಲಾಸ್” ಪರಿಶೀಲಿಸಿದರು.

ಹೈದರಾಬಾದ್ ಹೌಸ್ ನಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆ ನಡೆಸುತ್ತಿದ್ದ ಸಮಯದಲ್ಲಿ ಮೆಲಾನಿಯಾ ಟ್ರಂಪ್ ದೆಹಲಿಯ ಸರ್ವೋದಯ ಶಾಲೆಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಮೆಲಾನಿಯಾ ಅವರಿಗೆ ಆತ್ಮೀಯ ಸ್ವಾಗತ ನೀಡಿದರು. ಭಾರತೀಯ ಸಂಪ್ರದಾಯದಂತೆ ಅವರ ಹಣೆಗೆ ಕುಂಕುಮ ಇರಿಸಿ, ಆರತಿ ಎತ್ತುವ ಮೂಲಕ ಮೆಲಾನಿಯಾ ಅವರನ್ನು ಸ್ವಾಗತಿಸಿದರು. ಪುಟ್ಟ ಮಕ್ಕಳ ಸ್ವಾಗತದಿಂದ ಮೆಲಾನಿಯಾ ಮಂತ್ರ ಮುಗ್ದರಾದರು.

ಅನಂತರ, ತರಗತಿಯೊಂದರ ಕೊಠಡಿಗೆ ತೆರಳಿದ ಮೆಲಾನಿಯಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ‘ಹ್ಯಾಪಿನೆಸ್ ಕ್ಲಾಸ್’ ನಡೆಸುವ ಶಿಕ್ಷಕರೊಂದಿಗೆ ಮಾತುಕತೆ ನಡೆಸಿ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಮೂವರು ಶಿಕ್ಷಕಿಯರು ಮೆಲಾನಿಯಾ ಅವರೊಂದಿಗೆ ಇದ್ದರು. ಈ ಸಂದರ್ಭದಲ್ಲಿ ಶಿಕ್ಷಕರು ಕೇಳಿದ ಪ್ರಶ್ನೆಗಳಿಗೆ ಪುಟ್ಟ ಮಕ್ಕಳು ಉತ್ತರಿಸಿದರು. ಹಾಡು, ಸಂಗೀತ, ಆಟಗಳ ಬಗೆಗಿನ ತಮ್ಮ ಉತ್ಸಾಹವನ್ನು ಅವರು ವಿವರಿಸಿದರು. ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯವನ್ನು ಮೆಲಾನಿಯಾ ವೀಕ್ಷಿಸಿದರು.

ಶಾಲೆಯ ಶಿಕ್ಷಣ ಉತ್ತಮವಾಗಿದೆ ವಿದ್ಯಾರ್ಥಿಗಳು ತೋರಿಸಿದ ಪ್ರೀತಿ, ಆಪ್ತತೆಯನ್ನು ನಾನೆಂದೂ ಮರೆಯುವುದಿಲ್ಲ.. ಈ ಶಾಲೆಯಲ್ಲಿ ಕೇವಲ ಶಿಕ್ಷಣ ಮಾತ್ರವಲ್ಲದೆ ಉತ್ತಮ ನಡವಳಿಕೆಯನ್ನು ಕಲಿಸಿಕೊಡಲಾಗುತ್ತದೆ ಎಂದು ಮೆಲಾನಿಯಾ ಮೆಚ್ಚುಗೆಯ ನುಡಿಗಳನ್ನಾಡಿದರು.

Leave a Comment