ಸರ್ಕಾರಿ ಶಾಲೆ ಮಕ್ಕಳು ದೋಶದ್ರೋಹಿಗಳಾಗಲ್ಲ: ಸಚಿವ ಸುರೇಶ್

ಮಧುಗಿರಿ, ಫೆ. ೨೩- ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಸುಸಂಸ್ಕೃತರಾಗಿ ಬೆಳೆದಿರುತ್ತಾರೆ. ಅವರು ದೇಶದ್ರೋಹಿ ಕೆಲಸಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಹೇಳಿದರು.

ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ವತಿಯಿಂದ ಹಮ್ಮಿಕೊಂಡಿದ್ದ ಶತಮಾನೋತ್ಸವ ಆಚರಣೆ, ಸ್ಮರಣ ಸಂಚಿಕೆ ಬಿಡುಗಡೆ, ಕಟ್ಟಡ ಉದ್ಘಾಟನೆ ಹಾಗೂ ಹಳೇ ವಿದ್ಯಾರ್ಥಿಗಳ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಖಾಸಗಿ ಶಾಲೆಗಳು ತಲೆ ತಗ್ಗಿಸುವಂತೆ ಸರ್ಕಾರಿ ಶಾಲೆಗಳು ಉತ್ತಮ ವಿದ್ಯಾಭ್ಯಾಸ ನೀಡುತ್ತಿವೆ. ಇದಕ್ಕೆ ಮುಖ್ಯ ಕಾರಣ ಶಿಕ್ಷಕರು. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಶೇ. 90 ರಷ್ಟು ಶಿಕ್ಷಕರು ಉತ್ತಮ ನಡವಳಿಕೆಯನ್ನು ಹೊಂದಿದ್ದು, ಮುಂದೊಂದು ದಿನ ಸರ್ಕಾರಿ ಶಾಲೆಗೆ ಹೋಗಲು ಸೇರಿಸಲು ಪೋಷಕರು ಮುಗಿ ಬೀಳುವುದರಲ್ಲಿ ಸಂಶಯವಿಲ್ಲ ಎಂದರು.
ನನ್ನ ತಾಯಿಯ 37 ವರ್ಷ ಸರ್ಕಾರಿ ಸೇವೆ ಸಲ್ಲಿಸಿದ್ದು, ಶಿಕ್ಷಣ ಇಲಾಖೆಯ ಋಣ ತೀರಿಸಲು ನನಗೆ ಶಿಕ್ಷಣ ಖಾತೆ ದೊರಕಿದ್ದು, ಸರ್ಕಾರಿ ಶಾಲೆಗಳು ಉಳಿಯಲು ಸಾರ್ವಜನಿಕರ ಸಹಕಾರವೂ ಅತ್ಯಗತ್ಯ ಎಂದರು.

ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ ಬರಗಾಲಕ್ಕೆ ತುತ್ತಾಗಿರುವ ತಾಲ್ಲೂಕಿನಲ್ಲಿ ಶಿಕ್ಷಣವೊಂದೇ ಬಂಡವಾಳವಾಗಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿಸಿ ಉತ್ತಮ ಜೀವನವನ್ನು ರೂಪಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರವೂ ಹೆಚ್ಚಿನದಿರುತ್ತದೆ. ಮನೆಯೇ
ಮೊದಲ ಪಾಠಶಾಲೆಯಾಗಿದ್ದು, ತಾಯಿಯೇ ಮೊದಲ ಗುರು ಎಂದರು.

ಶಿಕ್ಷಣ ಇಲಾಖೆಗೆ ಸರ್ಕಾರ ನೀಡುತ್ತಿರುವ ಸವಲತ್ತುಗಳು ವಿದ್ಯಾರ್ಥಿಗಳಿಗೆ ತಲುಪಿಸಲು ಶಿಕ್ಷಕರು ಹಾಗೂ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಮಕ್ಕಳು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರನ್ನು ಮಾದರಿಯಾಗಿ ತೆಗೆದುಕೊಂಡಿರುತ್ತಾರೆ. ಅವರ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಿನದಾಗಿರುತ್ತದೆ ಎಂದರು.

ಸಮಾರಂಭದಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಇಂದಿರಾ ದೇನಾನಾಯ್ಕ್, ಸದಸ್ಯ ಸೊಸೈಟಿ ರಾಮಣ್ಣ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜಮ್ಮ ಅಶ್ವತ್‍ನಾರಾಯಣ್, ಡಿಡಿಪಿಐ ರೇವಣಸಿದ್ದಯ್ಯ, ತಹಶೀಲ್ದಾರ್ ಎಲ್.ಎಂ. ನಂದೀಶ್, ತಾಲ್ಲೂಕು ಪಂಚಾಯ್ತಿ ಇ.ಓ. ದೊಡ್ಡಸಿದ್ದಪ್ಪ, ಡಯಟ್ ಪ್ರಾಂಶುಪಾಲ ವೈ.ಎನ್. ರಾಮಕೃಷ್ಣಯ್ಯ, ಬಿ.ಇ.ಓ. ರಂಗಪ್ಪ, ಡಿವೈಪಿಸಿಗಳಾದ ಎಸ್.ರಾಜಕುಮಾರ್, ನರೇಂದ್ರಕುಮಾರ್, ಪುರಸಭಾ ಸದಸ್ಯ ಎಂ.ಆರ್. ಜಗನ್ನಾಥ್, ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಪಿ.ಎಲ್. ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Leave a Comment