ಸರ್ಕಾರಿ ಶಾಲೆ ಉಳಿಸಿ ಮುನ್ನಡೆಸಲು ಶಿಕ್ಷಕನ ಕಾಣಿಕೆ!

ಹೆಬ್ರಿ, ಜೂ.೨೦- ಸರ್ಕಾರಿ ಕನ್ನಡ ಶಾಲೆಗೆ ಮಕ್ಕಳು ಸೇರುವಂತೆ ಪ್ರೇರೆಪಿಸಲು ಸರ್ಕಾರಿ ಶಾಲೆಯ ಶಿಕ್ಷಕರೇ ಒಂದನೇ ತರಗತಿಗೆ ಸೇರಿದ ಮಕ್ಕಳಿಗೆ ತಲಾ ೨ ಸಾವಿರದಂತೆ ಮಕ್ಕಳ ಹೆಸರಿನಲ್ಲಿ ಠೇವಣಿ ಇಟ್ಟು ಸಮಾಜಕ್ಕೆ ಮತ್ತು ಶಿಕ್ಷಣಕ್ಕೆ ಅಪರೂಪದ ವಿಶೇಷ ಸೇವೆ ಸಲ್ಲಿಸಿದ್ದಾರೆ.

ಮುದ್ರಾಡಿ ನೆಲ್ಲಿಕಟ್ಟೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ನಿಂಜೂರು ಮಾಳಿಗೆ ಮನೆತನದ ರವೀಂದ್ರ ಹೆಗ್ಡೆ ಪೆರ್ಡೂರು ಪಾಡಿಗಾರ ಬಣ್ಣಂಪಳ್ಳಿ ಶಾಲೆಯ ಸರ್ಕಾರಿ ಶಾಲೆಯ ಮಕ್ಕಳಿಗೆ ಈ ಕೊಡುಗೆ ನೀಡಿದ್ದಾರೆ.

ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳನ್ನು ಪಡೆದು ಸಂಘಟನಾ ಚತುರ ದಾನಿಯಾಗಿ ಸಮಾಜ ಸೇವೆಯಲ್ಲಿ ಗುರುತಿಸಿ ಕೊಂಡಿರುವ ಉಡುಪಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ರವೀಂದ್ರ ಹೆಗ್ಡೆ ತಾನು ಸೇವೆ ಮಾಡುವ ಮುದ್ರಾಡಿ ನೆಲ್ಲಿಕಟ್ಟೆ ಸರ್ಕಾರಿ ಶಾಲೆ ಮಕ್ಕಳಿಗೆ ದಾನಿ ಶಿಕ್ಷಣ ಪ್ರೇಮಿ ಮುಂಬಯಿ ಉದ್ಯಮಿ ಮುದ್ರಾಡಿ ಸಿರಿಬೀಡು ದಿವಾಕರ ಶೆಟ್ಟಿಯವರಿಂದ ನಿರಂತರವಾಗಿ ೧ನೇ ತರಗತಿಗೆ ಸೇರುವ ಮಕ್ಕಳಿಗೆ ಠೇವಣಿಯ ಕೊಡುಗೆ ಕೊಡಿಸುತ್ತಿದ್ದಾರೆ.

ನಾವೊಂದು ಸರ್ಕಾರಿ ಸೇವೆಯಲ್ಲಿದ್ದು ಶಿಕ್ಷಕನಾಗಿ ಯಾವುದೇ ಸರ್ಕಾರಿ ಶಾಲೆಗಳು ಮುಚ್ಚುವುದನ್ನು ನೋಡಲು ಸಾಧ್ಯವಿಲ್ಲ. ಸರ್ಕಾರ ಎಲ್ಲಾ ರೀತಿಯ ನೆರವನ್ನು ನೀಡುತ್ತಿದೆ. ನುರಿತ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿ ಇದ್ದಾರೆ. ಪಾಠಗಳ ಜೊತೆಗೆ ಎಲ್ಲಾ ಚಟುವಟಿಕೆಗಳು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ದೊರೆಯುತ್ತಿದೆ. ಮನೆಯ ವಾತಾವರಣದಂತೆ ಶಾಲೆಯು ಕೂಡ ಇದೆ. ಸರ್ಕಾರ ಕೂಡ ಇದಕ್ಕಾಗಿ ಹಲವು ಹೊಸ ಹೊಸ ಯೋಜನೆಯನ್ನು ರೂಪಿಸುತ್ತಿದೆ. ಸರ್ಕಾರ ಮತ್ತು ಸಮಾಜದಿಂದ ಸಾಕಷ್ಟು ಪಡೆದಿದ್ದೇನೆ. ಸಮಾಜಕ್ಕೆ ಏನಾದರೂ ನನ್ನ ಮೂಲಕ ಕೊಡುಗೆಗಳು ಸಂದಾಯ

ಆಗಬೇಕು ಎಂದು ಮುಕ್ತ ಮನಸ್ಸಿನಿಂದ ಮಾಡಿದ್ದೇನೆ ಎಂದು ರವೀಂದ್ರ ಹೆಗ್ಡೆ ತಿಳಿಸಿದರು.

ಮನಸ್ಸು ತುಂಬಿ ಬಂದಿದೆ

ಕನ್ನಡ ಮಾಧ್ಯಮ ಶಾಲೆಗಳು ಉಳಿಯಬೇಕು ಎನ್ನುವುದು ನನ್ನ ಆಸೆ. ಅದಕ್ಕಾಗಿ ಏನಾದರೂ ಹೊಸ ವಿಧಾನದ ಮೂಲಕ ಸೇವೆ ನೀಡಬೇಕು ಎನ್ನುವ ಕನಸು ಇತ್ತು. ಅದನ್ನು ನಮ್ಮೂರಿನ ಶಾಲೆಯ ಮೂಲಕ ಈಡೇರಿಸಿದ್ದೇನೆ. ಮನಸ್ಸು ತುಂಬಿ ಬಂದಿದೆ.

ರವೀಂದ್ರ ಹೆಗ್ಡೆ

Leave a Comment