ಸರ್ಕಾರಿ ಶಾಲೆ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳ ಸಹಕಾರ

ಮಧುಗಿರಿ, ಜೂ. ೧೯- ಶಾಲಾ ಅಭಿವೃದ್ದಿ ಸಮಿತಿಗಳು ಹಳೆಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಸರ್ಕಾರಿ ಶಾಲೆಗಳನ್ನು ಉತ್ತಮವಾಗಿ ಅಭಿವೃದ್ದಿ ಪಡಿಸಬಹುದು ಎಂದು ಶಾಸಕ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಕೋಟೆ ಹಿ.ಪ್ರಾ.ಪಾಠಶಾಲೆ ಆವರಣದಲ್ಲಿ ತಾಲ್ಲೂಕಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕರಾವಳಿ ಹಾಗೂ ಮಲೆನಾಡು ಭಾಗದ ಸರ್ಕಾರಿ ಶಾಲೆಗಳ ಶಾಲಾಭಿವೃದ್ದಿ ಸಮಿತಿಯವರು ಶಿಕ್ಷಕರ ಕೊರತೆ ಇದ್ದರೆ ತಾತ್ಕಾಲಿಕವಾಗಿ ಬೇರೆ ಶಿಕ್ಷಕರನ್ನು ನೇಮಿಸಿ ಅವರಿಗೆ ವೇತನವನ್ನು ಕೊಡುತ್ತಾರೆ. ಇದರಿಂದ ಪಾಠ ಪ್ರವಚನಗಳು ನಿರಂತರವಾಗಿ ನಡೆಯುತ್ತವೆ ಎಂದ ಅವರು, ಸರ್ಕಾರ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ, ಮಧ್ಯಾಹ್ನದ ಬಿಸಿಯೂಟ, ಹಾಲು, ವಿದ್ಯಾರ್ಥಿ ವೇತನ ನೀಡುವ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡುತ್ತದೆ. ಪೋಷಕರು ಮಕ್ಕಳನ್ನು ಶಾಲೆಯಿಂದ ಬಿಡಿಸಿ ದುಡಿಮೆಗೆ ಕಳುಹಿಸಿ ಅವರ ಭವಿಷ್ಯ ಹಾಳು ಮಾಡಿದರೆ ಅದು ಶಿಕ್ಷಾರ್ಹ ಅಪರಾಧ ಎಂದರು.

ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ನೋಟ್ ಪುಸ್ತಕಗಳನ್ನು ವಿತರಿಸುತ್ತಿದ್ದು ಈ ವ್ಯವಸ್ಥೆಗೆ ಯಾವುದೇ ಹೊಸ ಅನುದಾನವಾಗಲಿ, ಹಣದ ಮೂಲಗಳಾಗಲಿ ಇಲ್ಲ. ಇದು ಸ್ಥಳೀಯ ಸಂಸ್ಥೆಗಳಾದ ಪುರಸಭೆ, ಗ್ರಾ.ಪಂ.ಗಳಲ್ಲಿ ಇರುವ ಹಣದಿಂದ ನೋಟ್ ಪುಸ್ತಕ ಖರೀದಿಸಿ ಉಚಿತವಾಗಿ ವಿತರಿಸುತ್ತಿರುವುದು ಇಡಿ ರಾಜ್ಯದಲ್ಲೇ ಪ್ರಥಮ ಎಂದರು.

ಆಗಸ್ಟ್ ಅಂತ್ಯದೊಳಗೆ ಕ್ಷೇತ್ರದಲ್ಲಿ ವಿದ್ಯುತ್ ವಂಚಿತವಾಗಿರುವ ಸುಮಾರು 6 ಸಾವಿರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಈ ಕಾರ್ಯಕ್ರಮಕ್ಕೆ ಪ್ರೇರಣೆಯಾದ ವಿದ್ಯಾರ್ಥಿ ಅಂಜನಮೂರ್ತಿ ನೋಟ್ ಪುಸ್ತಕ ಖರೀದಿಗೆ ರಜಾ ದಿನಗಳಲ್ಲಿ ಐಸ್ ಕ್ಯಾಂಡಿ ಮಾರಿ ಸಂಪಾದನೆಗೆ ತೊಡಗಿದ್ದನ್ನು ಕೆ.ಎನ್.ರಾಜಣ್ಣ ನೆನಪಿಸಿಕೊಂಡರು.

ಉಪವಿಭಾಗಾಧಿಕಾರಿ ಡಾ. ವೆಂಕಟೇಶಯ್ಯ ಮಾತನಾಡಿ, ಜನರನ್ನು ತಪ್ಪುದಾರಿಗೆ ಎಳೆಯುವ ಕೆಲಸವನ್ನು ವಿದ್ಯಾವಂತರೇ ಮಾಡುತ್ತಿರುವುದು ಆತಂಕಕಾರಿಯಾಗಿದ್ದು, ಸರ್ಕಾರ ಜಾತಿ ಬೇಧ ಮಾಡದೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 5 ಮೊಟ್ಟೆ ವಿತರಿಸುತ್ತಿದ್ದರೂ ಕೆಲ ಜಾತಿ ವಿದ್ಯಾರ್ಥಿಗಳಿಗೆ 3 ಮೊಟ್ಟೆ ಕೊಡುತ್ತಿದ್ದಾರೆ. ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ, ಸಕ್ಕರೆ ಮಾರಾಟವಾಗುತ್ತಿದೆ ಎಂದು ಸುಳ್ಳುಸುದ್ದಿ ಪ್ರಚಾರ ಮಾಡಲು ರಾಜ್ಯದಲ್ಲಿ 20 ಸಾವಿರ ವಾಟ್ಸ್‌ಪ್ ಗ್ರೂಪ್‌ಗಳಿವೆ.  ಎಂದ ಅವರು, ವಿದ್ಯಾರ್ಥಿಗಳು ಯಾವುದು ಸರಿ, ಯಾವುದು ತಪ್ಪು ಎನ್ನುವ ವಿಚಾರ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಕುತೂಹಲ ಮೂಡಿಸುವ ಆಲೋಚನೆಗಳನ್ನು ಬೆಳೆಸುವಂತಹ ಕೆಲಸಕ್ಕೆ ಶಿಕ್ಷಕರು ಮುಂದಾಗಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ಡಿಡಿಪಿಐ ಕೆ.ಜಿ.ರಾಜೇಂದ್ರ ಮಾತನಾಡಿ, ತಾಲ್ಲೂಕಿನ 299 ಶಾಲೆಗಳಲ್ಲಿನ 1ರಿಂದ 10ನೇ ತರಗತಿಯ 28 ಸಾವಿರ ವಿದ್ಯಾರ್ಥಿಗಳಿಗೆ 80 ಸಾವಿರ ನೋಟ್ ಪುಸ್ತಕಗಳನ್ನು ಏಕಕಾಲದಲ್ಲಿ ವಿತರಿಸಲಾಗುತ್ತಿದೆ ಎಂದರು.

ಸಮಾರಂಭದಲ್ಲಿ ತಾ.ಪಂ. ಅಧ್ಯಕ್ಷೆ ಇಂದಿರಾ, ಜಿ.ಪಂ. ಸದಸ್ಯ ಜಿ.ಜೆ.ರಾಜಣ್ಣ, ಪುರಸಭಾಧ್ಯಕ್ಷೆ ಎಲ್.ರಾಧಾ, ಉಪಾಧ್ಯಕ್ಷ ಎಂ.ಪಿ.ಗಣೇಶ್, ಸದಸ್ಯರುಗಳಾದ ಎಂ.ಕೆ.ನಂಜುಂಡಯ್ಯ, ಎಂ.ಎಸ್.ಚಂದ್ರಶೇಖರ್, ಬೆಂಕಿಪುರ ಮಂಜುನಾಥ್, ಅಯ್ಯೂಬ್, ಶ್ರೀನಿವಾಸ್, ಎಂ.ಜಿ.ಗೋಪಿನಾಥ್, ಅಲೀಂ, ಭಾರತಮ್ಮ,  ಬಿ.ಆರ್.ಸತ್ಯನಾರಾಯಣ, ರಘುಯಾದವ್, ಮುಖ್ಯಾಧಿಕಾರಿ ನವೀನ್‍ಚಂದ್ರ, ತಹಶೀಲ್ದಾರ್ ಹೆಚ್.ಶ್ರೀನಿವಾಸ್, ಎಪಿಎಂಸಿ ಅಧ್ಯಕ್ಷ ಪಿ.ಟಿ.ಗೋವಿಂದಯ್ಯ, ಕೃಷಿ ಇಲಾಖೆ ಅಧಿಕಾರಿ ಪರಶುರಾಂ, ಟೌನ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ಜಿ.ಸುದರ್ಶನ್‍ಕುಮಾರ್, ಬಿ.ಇ.ಓ ಎಂ.ವಿ.ರಾಜಣ್ಣ, ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಟಿ.ರಾಮಣ್ಣ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಸ್.ಆರ್.ರಾಜಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

Leave a Comment