ಸರ್ಕಾರಿ ಶಾಲೆಯಲ್ಲಿ ಓದಿದವರೇ ಶೇ.70ರಷ್ಟು ಉನ್ನತ ಹುದ್ದೆಯಲ್ಲಿದ್ದಾರೆ: ಸಂತೋಷ್ ಲಾಡ್

ಬಳ್ಳಾರಿ, ಮಾ.12: ಖಾಸಗೀ ಶಾಲೆಗಳಲ್ಲಿ ಓದಿದವರಷ್ಟೆ ಉನ್ನತ ಹುದ್ದೆ ಪಡೆಯುತ್ತಾರೆಂಬ ಕಲ್ಪನೆ ತಪ್ಪು ಸರ್ಕಾರಿ ಶಾಲೆಯಲ್ಲಿ ಓದಿದ ಶೇ.70ರಷ್ಟು ಜನರೇ ಉನ್ನತ ಹುದ್ದೆಯಲ್ಲಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ನಗರದ ಸತ್ಯನಾರಾಯಣಪೇಟೆಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ವಿದ್ಯಾರ್ಥಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ನಮ್ಮ ಕರ್ನಾಟಕ ಎಂಬ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ನಂತರ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.

ಆಂಗ್ಲ ಭಾಷೆಯಲ್ಲಿ, ಅದು ಖಾಸಗೀ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರೆ ನಮಗೆ ಉನ್ನತ ಹುದ್ದೆ ಎಂಬ ತಪ್ಪು ಕಲ್ಪನೆ ನಿಮ್ಮಲ್ಲಿ ಇದೆ. ಮೊದಲು ಅದರಿಂದ ಹೊರ ಬನ್ನಿ ಎಲ್ಲಿಯೇ ಓದಿ, ಶ್ರದ್ಧೆಯಿಂದ ಅಭ್ಯಾಸ ಮಾಡಿ ಆಳವಾದ ಜ್ಞಾನ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ

ವಿದ್ಯಾರ್ಥಿಗಳಿಗೆಲ್ಲರಿಗೂ ಉಚಿತ ಲ್ಯಾಪ್ ಟಾಪ್ ಕೊಡಿ, ನಾವು ರಾಜಕೀಯಕ್ಕೆ ಬರ ಬಹುದೆ, ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳನ್ನು ಬಳ್ಳಾರಿಯಲ್ಲಿ ಮಾಡಿ, ಜಾತಿ ಬೇಧವಿಲ್ಲದೆ, ವಿದ್ಯಾರ್ಥಿ ವೇತನ ಸಮನಾಗಿ ಹಂಚಿ, ಮೊದಲಾದ ಪ್ರಶ್ನೆಗಳನ್ನು ಕೇಳಿದರು.

ಸದ್ಯ ಸರ್ಕಾರ ಸರ್ಕಾರಿ ಕಾಲೇಜಿನಲ್ಲಿ ಬಡ ವಿದ್ಯಾರ್ಥಿಗಳು ಇರುತ್ತಾರೆಂದು ಉಚಿತ ಲ್ಯಾಪ್ ಟಾಪ್ ನೀಡಿದೆ. ಮುಂಬರುವ ದಿನಗಳಲ್ಲಿ ಎಲ್ಲಾ ವರ್ಗದ ಖಾಸಗೀ ಕಾಲೇಜಿನ ವಿದ್ಯಾರ್ಥಿಗಳಿಗೂ ನೀಡುವ ಚಿಂತನೆ ಇದೆ ಎಂದರು.

ವಿದ್ಯಾರ್ಥಿಗಳು ರಾಜಕೀಯಕ್ಕೆ ಬರಬಾರದೆಂದು ಯಾರು ಹೇಳಿಲ್ಲ, ಸಂವಿಧಾನದ ನಿಯಮದಂತೆ ಅಗತ್ಯ ವಯಸ್ಸಿದ್ದರೆ ವಿದ್ಯಾರ್ಥಿ ಸಂಘಟನೆಗಳಿಂದ ಪ್ರಬಲವಾಗಿ ಬೆಳೆದು ರಾಜಕೀಯ ಪ್ರವೇಶ ಮಾಡಬಹುದು. ಓರಿಸ್ಸಾದಲ್ಲಿ ವಿದ್ಯಾರ್ಥಿ ಸಂಘಟನೆಯಿಂದಲೇ 34 ವರ್ಷದಲ್ಲಿಯೇ ಸಿ.ಎಂ.ಆದರು ಎಂದರು.

ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಒತ್ತು ನೀಡಿದ್ದು ಬದಲಾವಣೆ ಪ್ರಕ್ರಿಯೆ ನಡೆದಿದೆ. ಈ ವರ್ಷ 25ಸಾವಿರ ಶಿಕ್ಷಕರ ನೇಮಕ ಮಾಡಿದೆ ಎಂದರು.

ವಿದ್ಯಾರ್ಥಿಗಳು ಪ್ರಶ್ನೆ ಕೇಳುವ ರೀತಿ, ಮೈಕ್ ವ್ಯವಸ್ಥೆ ಹದಗೆಟ್ಟಿದ್ದರಿಂದ ಯಾರು ಏನು ಕೇಳುತ್ತಾರೆಂಬ ಸಫಲತೆ ಇರಲಿಲ್ಲ.

ಸಮಾರಂಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಅಲ್ಲಂ ಪ್ರಶಾಂತ್ ಎನ್.ಎಸ್.ಯು.ಐ.ನ ರಾಜ್ಯ ಅಧ್ಯಕ್ಷ ಮಂಜುನಾಥಗೌಡ, ಜಿಲ್ಲಾ ಅಧ್ಯಕ್ಷ ಸಿದ್ದು ಹಳ್ಳೇಗೌಡ, ವಿವೇಕ್ ಮೊದಲಾದವರು ಪಾಲ್ಗೊಂಡಿದ್ದರು.

Leave a Comment