ಸರ್ಕಾರಿ ಶಾಲಾ ಮಕ್ಕಳಿಗೆ ಭಗವದ್ಗೀತಾ ಪುಸ್ತಕ ವಿತರಣೆ

ಮೈಸೂರು. ಆ.23: ವಿಪ್ರ ಸಹಾಯವಾಣಿ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿಂದು ಸರ್ಕಾರಿ ಶಾಲಾ ಮಕ್ಕಳಿಗೆ ಸಂಕ್ಷಿಪ್ತವಾಗಿ ರಚಿಸಿರುವ ಭಗವದ್ಗೀತಾ ಪುಸ್ತಕವನ್ನು ನೀಡಿ ಭಗವದ್ಗೀತೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಮಾತನಾಡಿ ‘ಶ್ರೀಕೃಷ್ಣನ ದಿವ್ಯ ಸಂದೇಶ ಅನುಸರಿಸಿ’ಎಂದರು. ‘ಶ್ರೀಕೃಷ್ಣ ಪರಮಾತ್ಮ ಲೋಕಪ್ರಿಯ ದೇವರು. ತುಳಸಿಯ ಒಂದು ಎಲೆ ಅರ್ಪಿಸಿದರೂ ನಮ್ಮೆಲ್ಲರನ್ನು ರಕ್ಷಿಸುತ್ತಾನೆ. ಶ್ರೀಕೃಷ್ಣನ ದಿವ್ಯ ಸಂದೇಶ ಬಾಳಿನಲ್ಲಿ ಅನುಸರಿಸಿದರೆ ವಿಶ್ವವೇ ನಂದನವನವಾಗಿ ಶಾಂತಿ ನೆಲೆಸಲಿದೆ . ಸಮಾಜದಲ್ಲಿ ಅಂತಃಕಲಹಗಳನ್ನು ತೊಡೆದುಹಾಕಲು ಶ್ರೀಕೃಷ್ಣ ಸಂದೇಶಗಳು ನೆರವಾಗುತ್ತದೆ. ಉತ್ತಮ ಸಮಾಜ ನಿರ್ಮಾಣದ ಕೆಲಸಗಳು ಕೃಷ್ಣನ ಅನುಗ್ರಹದಿಂದ ಸಾಧ್ಯವಿದೆ’ ಎಂದರು.
ಖ್ಯಾತ ಲೇಖಕ ಪ್ರಸನ್ನ ಹೆಗ್ಡೆ ಮಾತನಾಡಿ ನೂರಾರು ದೇಶಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಆಚರಿಸುವ ಮೂಲಕ ಜಗತ್ತಿನ ನಾಯಕ ಶ್ರೀ ಕೃಷ್ಣ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಸ್ವಂತಕ್ಕೆ ಏನೂ ಬಯಸದೆ ಸಮಾಜಕ್ಕಾಗಿ ಬದುಕಿ, ಎಲ್ಲಾ ರೀತಿಯ ಶಕ್ತಿಯನ್ನು ನೀಡಿದವ ಶ್ರೀ ಕೃಷ್ಣ. ಗೋವಿನ ಜೀವನ ಆದರ್ಶ ಎಲ್ಲರಿಗೂ ಮಾದರಿ‘ ಎಂದು ಹೇಳಿದರು.
ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ ಮಾತನಾಡಿ . ‘ಶ್ರೀಕೃಷ್ಣನ ಕೊಳಲು ಪ್ರೀತಿ ಸಹೋದರತ್ವದ ಸಂಕೇತವಾಗಿದೆ. ಈ ಒಳಾರ್ಥವನ್ನು ನಾವಿಂದು ಅರ್ಥ ಮಾಡಿಕೊಳ್ಳಬೇಕಿದೆ ಪ್ರೀತಿ, ಸೋದರತ್ವದ ಸಂಕೇತವಾದ ಶ್ರೀಕೃಷ್ಣನ ಕೊಳಲನ್ನು ನಾವಿಂದು ಮರೆತು ಬಿಟ್ಟಿದ್ದೇವೆ. ಮಹಾಭಾರತ ಯುದ್ಧ ಮನುಷ್ಯನ ಜೀವನದಲ್ಲಿ ನಿತ್ಯ ನಡೆಯುವ ಘಟನೆಗಳೇ ಆಗಿವೆ. ಪ್ರೀತಿ, ವಿಶ್ವಾಸದಿಂದ ಬದುಕಿದರೆ ಎಲ್ಲರ ಮನಸ್ಸನ್ನು ಗೆಲ್ಲಬಹುದು ಎಂಬ ಸಂದೇಶ ಶ್ರೀಕೃಷ್ಣ ದೇವರು ನೀಡಿದ್ದಾರೆ ಸತ್ಯ, ನ್ಯಾಯಕ್ಕಾಗಿ ಹೋರಾಟ ನಡೆಸಿದ ಶ್ರೀಕೃಷ್ಣ. ಸಮಾಜದಲ್ಲಿ ಇಂದಿಗೂ ಕಂಸ, ದುರ್ಯೋಧನರು ಇದ್ದಾರೆ, ಅಂಥ ಶಕ್ತಿಯ ನಾಶಕ್ಕೆ ಪ್ರಯತ್ನ ಮಾಡುವ ಚಿಂತನೆ ಮಾಡಬೇಕಾಗಿದೆ ಎಂದರು.
ಈ ಸಂದರ್ಭ ಇಳೈ ಆಳ್ವಾರ್ ಸ್ವಾಮೀಜಿ , ಮಾಜಿ ನಗರ ಪಾಲಿಕೆ ಸದಸ್ಯರಾದ ಎಂ ಡಿ ಪಾರ್ಥಸಾರಥಿ, ಉದ್ಯಮಿಗಳಾದ ಅಶ್ವಥ್ ನಾರಾಯಣ್, ಅಪೂರ್ವ ಸುರೇಶ್, ಯೋಗನರಸಿಂಹ( ಮುರಳಿ ), ವಿಪ್ರ ಸಹಾಯವಾಣಿಯ ಸಂಚಾಲಕರಾದ ವಿಕ್ರಂ ಅಯ್ಯಂಗಾರ್, ವಿನಯ್ ಕಣಗಾಲ್, ಜಯಸಿಂಹ ಶ್ರೀಧರ್ ,ರಾಜಾ ಕೃಷ್ಣಸ್ವಾಮಿ ,ಶ್ರೀಕಾಂತ್ ಕಶ್ಯಪ್, ರಂಗನಾಥ್ ,ಚಕ್ರಪಾಣಿ, ಪ್ರಶಾಂತ್ ,ಹರೀಶ್ ,ಬರಹಗಾರರಾದ ಲತಾ ಮೋಹನ್, ಶಾಲೆಯ ಮುಖ್ಯ ಶಿಕ್ಷಕರಾದ ಸುಗುಣ ವತಿ, ಪುಷ್ಪ ಹಾಗೂ ಇನ್ನಿತರರು ಹಾಜರಿದ್ದರು.

Leave a Comment