ಸರ್ಕಾರಿ ಪ್ರಾತ್ಯಕ್ಷಿಕ ಪ್ರೌಢ ಶಾಲೆ ಮರು ಸ್ಥಾಪನೆಗೆ ಸೂಚನೆ

 

 

ಕಲಬುರಗಿ,ಅ.11-ನಗರದ ಹೃದಯ ಭಾಗದಲ್ಲಿದ್ದ ಸರ್ಕಾರಿ ಪ್ರಾತ್ಯಕ್ಷಿಕ ಪ್ರೌಢ ಶಾಲೆಯನ್ನು 6.ಕಿ.ಮೀ. ದೂರದ ನಂದಿಕೂರಗೆ ಸ್ಥಳಾಂತರ ಮಾಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಮುಂಬರುವ ಶೈಕ್ಷಣಿಕ ವರ್ಷದಿಂದ ಶಾಲೆಯನ್ನು ಮೊದಲಿದ್ದ ಸ್ಥಳದಲ್ಲಿಯೇ ನಡೆಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ (ಡಿಡಿಪಿಐ) ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಕಳೆದ 50 ವರ್ಷಗಳಿಂದ ನಡೆದುಕೊಂಡು ಬಂದ ಶಾಲೆಯನ್ನು ದಿಢೀರನೆ ಸ್ಥಳಾಂತರ ಮಾಡಿರುವುದೇಕೆ ಎಂದು ಅವರು ಡಿಡಿಪಿಐ ಅವರನ್ನು ತರಾಟೆಗೆ ತೆಗೆದುಕೊಂಡರು. 37 ಜನ ವಿದ್ಯಾರ್ಥಿಗಳು, 8 ಜನ ಶಿಕ್ಷಕರಿರುವ ಶಾಲೆಯನ್ನು ಸ್ಥಳಾಂತರ ಮಾಡಲು ಯಾವುದೇ ಬಲವಾದ ಕಾರಣಗಳಿರಲಿಲ್ಲ. ಶಿಕ್ಷಕಿಯೊಬ್ಬರ ಕಾರಣಕ್ಕೆ ಶಾಲೆಯನ್ನೇ ಸ್ಥಳಾಂತರ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಶಿಕ್ಷಕರ ರಾಜಕಾರಣದಿಂದ 50 ವರ್ಷಗಳಿಂದ ನಡೆದುಕೊಂಡು ಬಂದ ಶಾಲೆಯನ್ನು ಬೇರೆಡೆ ಸ್ಥಳಾಂತರಿಸುವುದು ದುರಂತದ ಸಂಗತಿಯಾಗಿದ್ದು, ಕನ್ನಡ ಹೇಗೆ ಸಾಯುತ್ತಿದೆ ಎನ್ನುವುದುಕ್ಕೆ ಇದೊಂದು ದೊಡ್ಡ ಉದಾಹರಣೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಲೆ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ ಅವರು ಮುಂದಿನ ವರ್ಷದಿಂದ ಮೊದಲಿದ್ದ ಸ್ಥಳದಲ್ಲಿಯೇ ಶಾಲೆ ನಡೆಸಬೇಕು ಎಂದು ಸೂಚಿಸಿದರು.

@12bc = ಮಾನ್ಯತೆ ರದ್ದುಪಡಿಸಿ

ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಕಡ್ಡಾಯವಾಗಿ ಕಲಿಸದ ಕೇಂದ್ರ ಪಠ್ಯಕ್ರಮದ 6 ಶಾಲೆಗಳ ಮಾನ್ಯತೆ ರದ್ದುಪಡಿಸಲು ಆದೇಶ ನೀಡುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಡಿಡಿಪಿಐ ಅವರಿಗೆ ಸೂಚನೆ ನೀಡಿದರು. ಅರಬ್ ದೇಶದ ಬಹೆರನ್ ನಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸಲಾಗುತ್ತಿದೆ. ಅಲ್ಲಿ ಸಾಧ್ಯವಾದದ್ದು ಇಲ್ಲೇಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಖಾಸಗಿ ಶಾಲೆಗಳ ಬಗ್ಗೆ ಹೆಚ್ಚಿನ ಒಲವು ಇರುವುದೇ ಇದಕ್ಕೆಲ್ಲ ಕಾರಣ ಎಂದು ಅಸಾಮಾಧಾನ ವ್ಯಕ್ತಪಡಿಸಿದರು.

@12bc = 3 ತಿಂಗಳಿಗೊಮ್ಮೆ ಸಭೆ

ಪ್ರತಿ ಮೂರು ತಿಂಗಳಿಗೊಮ್ಮೆ ಕನ್ನಡ ಜಾಗೃತಿ ಸಮಿತಿ ಸದಸ್ಯರ ಸಭೆ ನಡೆಸಿ ವರದಿ ನೀಡುವಂತೆ ಪ್ರೊ.ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಅವರಿಗೆ ಸೂಚನೆ ನೀಡಿದರು.

ಜಿಲ್ಲಾಡಳಿತಕ್ಕೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ವೆಬ್ ಸೈಟ್ ಗಳು ಕನ್ನಡದಲ್ಲಿಯೇ ಇರಬೇಕು ಎಂದು ಅವರು ಸೂಚಿಸಿದರು.

ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ, ಕನ್ನಡ ಜಾಗೃತಿ ಸಮಿತಿ ರಾಜ್ಯ ಮಟ್ಟದ ಸದಸ್ಯ ಮಹಾಂತೇಶ ಹಟ್ಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ, ಸೇಡಂ ಸಹಾಯಕ ಆಯುಕ್ತೆ ಬಿ.ಸುಶೀಲಾ, ಕನ್ನಡ ಜಾಗೃತಿ ಸಮಿತಿ ಜಿಲ್ಲಾ ಮಟ್ಟದ ಸದಸ್ಯರಾದ ಡಾ.ಮೀನಾಕ್ಷಿ ಬಾಳಿ, ಡಾ.ಅಮೃತಾ ಕಟಕೆ, ಡಾ.ಶಿವಗಂಗಾ ರುಮ್ಮಾ, ಡಾ.ಚಂದ್ರಕಲಾ ಬಿದರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Leave a Comment