ಸರ್ಕಾರಿ ನೌಕರರ 1 ದಿನದ ವೇತನ ಸಂತ್ರಸ್ತರ ನಿಧಿಗೆ

ಬೆಂಗಳೂರು, ಆ. ೧೪- ರಾಜ್ಯದ ನೆರೆ ಸಂತ್ರಸ್ಥರ ನೆರವಿಗೆ ಧಾವಿಸಿರುವ ಸರ್ಕಾರಿ ನೌಕರರು ಒಂದು ದಿನದ ವೇತವನ್ನು ನೆರೆ ಸಂತ್ರಸ್ಥರ ನಿಧಿಗೆ ನೀಡಿದ್ದು, ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಒಂದು ದಿನ ವೇತನ ಕಡಿತ ಮಾಡುವಂತೆ ಪತ್ರ ನೀಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಸರ್ಕಾರಿ ನೌಕರರ ಒಂದು ದಿನದ ವೇತನವನ್ನು ಕಡಿತ ಮಾಡಿ ಅದನ್ನು ನೆರೆ ಸಂತ್ರಸ್ಥರ ಪರಿಹಾರ ಕಾರ್ಯಗಳಿಗೆ ಬಳಸಿಕೊಳ್ಳುವಂತೆ ಪತ್ರ ನೀಡಿದರು.
@12bc = ಷಡಕ್ಷರಿ ಹೇಳಿಕೆ
ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ನೆರೆ ಸಂತ್ರಸ್ಥರ ನೆರವಿಗಾಗಿ ನೌಕರರ ಒಂದು ದಿನದ ಸಂಬಳವನ್ನು ಕೊಟ್ಟಿದ್ದೇವೆ. ಒಂದು ದಿನದ ಸಂಬಳ 200 ಕೋಟಿ ರೂ. ಆಗುತ್ತದೆ ಎಂದು ಅವರು ಹೇಳಿದರು.
ನೌಕರರ ಒಂದು ದಿನದ ಸಂಬಳವನ್ನು ಖಜಾನೆಯಿಂದ ಕಡಿತ ಮಾಡಿಕೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಪತ್ರ ನೀಡಿದ್ದೇವೆ. ಸರ್ಕಾರಿ ನೌಕರರು ನೆರೆ ಪರಿಹಾರ ಕಾರ್ಯಗಳಿಗೆ ಅಗತ್ಯ ಸಹಕಾರ ಮತ್ತು ಎಲ್ಲ ನೆರವು ನೀಡಲು ಬದ್ಧರಾಗಿದ್ದಾರೆ ಎಂದರು.
ರಾಜ್ಯದಲ್ಲಿ ನೆರೆ ಪರಿಸ್ಥಿತಿ ಉಂಟಾದ ತಕ್ಷಣ ಸರ್ಕಾರಿ ನೌಕರರು ಒಂದು ದಿನದ ವೇತನ ನೀಡುವುದಾಗಿ ಮುಖ್ಯಮಂತ್ರಿಗಳಿಗೆ ವಾಗ್ದಾನ ನೀಡಿದ್ದೆವು. ಅದರಂತೆ ಇಂದು ಅಧಿಕೃತವಾಗಿ ಸಂಘದಿಂದ ಪತ್ರ ನೀಡಿದ್ದೇವೆ ಎಂದರು.

Leave a Comment