ಸರ್ಕಾರಿ ನೌಕರರ ವೇತನಕ್ಕೆ ಕೊರೊನಾ ಕತ್ತರಿ

ಬೆಂಗಳೂರು, ಏ 7-ಕೊರೊನಾ ವೈರಾಣು ಹೊಡೆತಕ್ಕೆ ಸಿಲುಕಿ ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿರುವ ರಾಜ್ಯ ಸರ್ಕಾರ ಈಗ ಸರ್ಕಾರಿ ನೌಕರರ ಸಂಬಳಕ್ಕೂ ಕತ್ತರಿ ಹಾಕುವ ಕುರಿತು ಗಂಭೀರ ಚಿಂತನೆ ನಡೆಸುತ್ತಿದೆ.

ರಾಜ್ಯ ಸರ್ಕಾರದ ಉನ್ನತ ಮಟ್ಟದಲ್ಲಿ ಈಗಾಗಲೇ ಸರ್ಕಾರಿ ನೌಕರರ ಸಂಬಳ ಕಡಿತಗೊಳಿಸುವ ಕುರಿತು ಸಭೆ ನಡೆಸಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹಾಗೂ ಹಣಕಾಸು ಇಲಾಖೆಯಿಂದ ವಿಸೃತ ವರದಿ ಕೇಳಿದೆ.

ಲಾಕ್‌ಡೌನ್ ಮುಂದುವರೆದರೆ ಏಪ್ರಿಲ್ ತಿಂಗಳ ಸಂಬಳವನ್ನು ಕಡಿತಗೊಳಿಸುವುದು ಅನಿವಾರ್ಯವಾಗಬಹುದೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈಗಾಗಲೇ ಸುಳಿವು ನೀಡಿದ್ದಾರೆ. ಆದರೆ ರಾಜ್ಯದ ಆರ್ಥಿಕ ಸ್ಥಿತಿಗತಿಯನ್ನು ಅವಲೋಕಿಸಲಾಗಿ ಲಾಕ್‌ಡೌನ್ ಏಪ್ರಿಲ್ 14 ಕ್ಕೆ ಸಡಿಲುಗೊಂಡರೂ ಏಪ್ರಿಲ್ ತಿಂಗಳ ವೇತನವನ್ನು ಕಡಿತಗೊಳಿಸುವ ಕುರಿತು ಈಗ ಗಂಭೀರ ಚಿಂತನೆ ನಡೆಯುತ್ತಿದೆ.

ಈ ತಿಂಗಳು 14 ಕ್ಕೆ ಲಾಕ್‌ಡೌನ್ ಅವಧಿ ಪೂರ್ಣಗೊಂಡರೂ ಸರ್ಕಾರದ ಆಡಳಿತ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಪುನರಾರಂಭಗೊಳಿಸಲು ಕನಿಷ್ಠ 8-10 ದಿನಗಳ ಕಾಲಾವಕಾಶ ಬೇಕಾಗುತ್ತದೆ. ಈ ಮಧ್ಯೆ ಲಾಕ್‌ಡೌನ್‌ನ್ನು ಸಂಪೂರ್ಣವಾಗಿ ಸಡಿಲುಗೊಳಿಸಬೇಕೆ ಅಥವಾ ಕೆಲ ನಿರ್ಬಂಧಗಳನ್ನು ಮುಂದುವರೆಸಬೇಕೆ ಎಂಬ ಜಿಜ್ಞಾಸೆಯಿರುವ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳಲ್ಲಿ ಸರ್ಕಾರಿ ಕಚೇರಿಗಳು ಪೂರ್ಣಪ್ರಮಾಣದಲ್ಲಿ ಕಾರ್ಯ ನಿರ್ವಹಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಏಪ್ರಿಲ್ ತಿಂಗಳಲ್ಲಿ ಶೇ. 20ರಷ್ಟು ಸಂಬಳವನ್ನು ಕಡಿತಗೊಳಿಸುವ ಕುರಿತು ಆಲೋಚನೆ ನಡೆಯುತ್ತಿದೆ.

ಕೇಂದ್ರ ಸರ್ಕಾರ ಕೈಗೊಂಡಿರುವ ಜನಪ್ರತಿನಿಧಿಗಳ ವೇತನ ಕಡಿತ ಮಾದರಿಯನ್ನೇ ಅನುಸರಿಸಲು ರಾಜ್ಯ ಸರ್ಕಾರ ಯೋಚಿಸಿದ್ದು, ಇದರ ಜೊತೆಗೆ ಸರಕಾರಿ ನೌಕರರ ಸಂಬಳವನ್ನು ಕಡಿತಗೊಳಿಸಿ ಆದಾಯ ಕ್ರೂಢಿಕರಿಸುವ ಮೂಲಕ ಜನಪರ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗಬಹುದೆಂದು ಯೋಚಿಸಲಾಗಿದೆ.

ಸಂಬಳ ಕಡಿತಕ್ಕೆ ಅಪಸ್ವರ ಉಂಟಾದರೆ ಮುಂದಿನ 3 ತಿಂಗಳುಗಳ ಕಾಲ ಸಂಬಳವನ್ನು ಶ್ರೇಣಿಗನುಸಾರ ಶೇಕಡಾವಾರು ಸಂಬಳದ ಪಾವತಿಯನ್ನು ತಡೆಹಿಡಿಯುವ ಕುರಿತು ಪರ್ಯಾಯ ಯೋಜನೆ ರೂಪಿಸಲಾಗುತ್ತಿದೆ. ಸ್ಥಿತಿಗತಿಯನ್ನು ಅವಲೋಕಿಸಿ ರಾಜ್ಯ ಸರ್ಕಾರ ಬರುವ ವಾರ ಈ ಕುರಿತು ಸ್ಪಷ್ಟ ನಿಲುವು ತಾಳಲಿದೆ.

ಅರಾಜಕತೆಯ ಆತಂಕ
ಕೊರೊನಾ ದಾಳಿಯಿಂದಾಗಿ ಉದ್ಯೋಗಾವಕಾಶಗಳಿಂದ ಕೈತೊಳೆದುಕೊಳ್ಳುವ ಅವಿದ್ಯಾವಂತರಿಗೆ ಈಗ ಅಪರಾಧವೊಂದೇ ಜೀವನೋಪಾಯ ಎನ್ನುವ ಆತಂಕ ಮನೆಮಾಡಿದೆ.
ಉದ್ಯೋಗ ಕಳೆದುಕೊಳ್ಳುವ ಅಸಂಖ್ಯಾತರು ಕಳ್ಳತನ, ದರೋಡೆ, ಕೊಲೆ ಸುಲಿಗೆಯಂತಹ ದುಷ್ಕೃತ್ಯಗಳಿಗೆ ಕೈಹಾಕುವ ಆತಂಕವಿದೆ. ಇನ್ನು ವಿದ್ಯಾವಂತರು ಆನ್ ಲೈನ್ ಮೂಲಕ ಕನ್ನ ಹಾಕುವ ಪ್ರವೃತ್ತಿಯನ್ನೇ ವೃತ್ತಿಯಾಗಿ ಮಾಡಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

Leave a Comment