ಸರ್ಕಾರಿ ಜಮೀನು: ಸೂಕ್ತ ನ್ಯಾಯ ಒದಗಿಸಲು ಮನವಿ

ರಾಯಚೂರು.ಮಾ.12- ನಗರಸಭೆ ಸರ್ಕಾರಿ ಜಮೀನು ಸರ್ವೇ ನಂ. 1476 /*1 ವಿಸ್ತೀರ್ಣ 12 ಎಕರೆ 2 ಗುಂಟೆ, ವಾರ್ಡ್ ನಂ. 6 ರ ನಿವಾಸಿಗಳ ಮನೆ ನಿವೇಶನಗಳ ಮೇಲೆ ದೌರ್ಜನ್ಯವೆಸಗುತ್ತಿರುವುದನ್ನು ಖಂಡಿಸಿ ಜೈ ಕನ್ನಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎನ್.ಶರಣಪ್ಪ ಅವರು ಮನವಿ ಸಲ್ಲಿಸಿದರು.

ಈ ಸಂಬಂಧ ಜಿಲ್ಲಾಧಿಕಾರಿಗಳ ಸ್ಥಾನಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ನಗರದ ರಾಂಪೂರು ರಸ್ತೆ ವಾರ್ಡ್ ನಂ. 6 ರ ಸ್ಲಂ ನಿವಾಸಿಗಳಾದ ದಲಿತರು ಹಾಗೂ ಮುಸ್ಲಿಂ ಸೇರಿದಂತೆ ಸುಮಾರು 40 ರಿಂದ 50 ವರ್ಷಗಳ ಹಿಂದಿನಿಂದಲೂ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದ ಹುಲುಸುಂಬಿ ಎನ್ನುವ ಹೆಸರಿನ ಇನಾಮು ಮೂಲಕ ಪಡೆದ ಜಮೀನು ನಗರಸಭೆ ಹೆಸರಿನಲ್ಲಿ ಕಾಯ್ದಿರಿಸಲಾದ ಸರ್ವೇ ನಂ. 1476 /*1 ವಿಸ್ತೀರ್ಣ 12 ಎಕರೆ 2 ಗುಂಟೆ ಈ ಸದರಿ ಜಮೀನಿನ ಇನಾಮುದಾರರೆಂದು ಹೇಳಿಕೊಂಡು ಆ ಸಮಯದಲ್ಲಿ ಎಲ್ಲಾ ಜನಾಂಗದ ಬಡ ಜನರಿಗೆ ಮಾರುಕಟ್ಟೆ ದರದಲ್ಲಿ ಪ್ಲಾಟ್‌ಗಳನ್ನು ಮಾರಾಟ ಮಾಡಿದ್ದಿರುತ್ತದೆಂದರು.
ಎಲ್ಲಾ ಜನಾಂಗದ ನಿವಾಸಿಗಳು ಮನೆಗಳನ್ನು ಕಟ್ಟಿಕೊಂಡು ನಗರಸಭೆಯ ಆಸ್ತಿ ತೆರಿಗೆ, ಕರೆಂಟ್ ಬಿಲ್, ನೀರಿನ ಕರ ಇತ್ಯಾದಿಗಳನ್ನು ಕಾನೂನು ಪ್ರಕಾರ ಕಟ್ಟುತ್ತಾ ಬಂದಿದ್ದರೂ, ಕಾಲೋನಿಯಲ್ಲಿ ಮಸೀದಿ, ಗುಡಿ-ಗುಂಡಾರಗಳು ಸೇರಿದಂತೆ 400 ರಿಂದ 500 ಮನೆಗಳಿವೆ. ಮನೆಗಳನ್ನು ಕಟ್ಟಿಕೊಳ್ಳುವ ಸಂದರ್ಭದಲ್ಲಿ ಯಾರೊಬ್ಬರು ಜಮೀನಿನ ಬಗ್ಗೆ ಆಕ್ಷೇಪಣೆ ಅಥವಾ ತಕರಾರು ಮಾ‌ಡಿರುವುದಿಲ್ಲವೆಂದರು.
ಮೂಲ ದಾಖಲಾತಿಗಳನ್ನು ಪರಿಶೀಲಿಸಿ, ವಾರ್ಡ್‌ ನಂ. 6 ರಲ್ಲಿರುವ ಜಮೀನು ಸರ್ವೆ ಮಾಡಿಸಿ ಸರ್ಕಾರದ ಆಡಳಿತಕ್ಕೆ ವಶಪಡಿಸಿಕೊಂಡು, ಅಲ್ಲಿ ವಾಸಿಸುತ್ತಿರುವ ಬಡ ಜನರಿಗೆ ತೊಂದರೆಯಾಗದಂತೆ ಭದ್ರತೆ ಒದಗಿಸಿ ಮನೆಗಳ ಮಾಲೀಕರಿಗೆ ಸರಕಾರದಿಂದ ಹಕ್ಕುಪತ್ರವನ್ನಾಗಲೀ ಅಥವಾ ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ಓಎಲ್ ನಂಬರ್ ಪ್ಲಾಟ್‌ಗಳನ್ನು ಡಿಮ್ಯಾಂಡ್ ರಿಜಿಸ್ಟ್ರಾರ್‌ನಲ್ಲಿ ಸೇರಿಸಿ ಸೂಕ್ತ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಂ.ವಸಂತ್ ಕುಮಾರ್, ಜಗದೀಶ್, ಕೆ.ನಾಗರಾಜ್, ಎಂ.ಡಿ.ಸಲೀಂ, ಚನ್ನಪ್ಪ ಬಂಡಾರಿ, ರಮೇಶ್ ಸಿರವಾರ, ವಿಜಯ್, ಖಾಜಾ ಮೋಹಿನುದ್ದಿನ್, ಬಸವರಾಜ ನಾಯಕ, ಗೋಪಾಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment