ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮನೆ ಕಟ್ಟಿದ ಬಡವರಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್!

ಬೆಂಗಳೂರು,ಜ‌ 23-ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿರುವ ಬಡವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ.
ಅಕ್ರಮ ಸಕ್ರಮ‌ ಯೋಜನೆಯಡಿ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿರುವ ಬಡವರಿಗೆ ಹಕ್ಕು ಪತ್ರ ನೀಡಲು ನಿರ್ಧರಿಸಿದೆ. ಈ ಸಂಬಂಧ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ‌ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಟ್ಟಿಕೊಂಡಿದ್ದ ಮನೆಗಳನ್ನು ಸಕ್ರಮ ಗೊಳಿಸಲಾಗುವುದು. ಜ.28ಕ್ಕೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 10,000 ಬಡವರಿಗೆ ಹಕ್ಕು ಪತ್ರ ವಿತರಿಸಲಿದ್ದಾರೆ ಎಂದು ತಿಳಿಸಿದರು.
20*30, 30*40 ಅಳತೆಯಲ್ಲಿ ಕಟ್ಟಿರುವ ಮನೆಗಳ ಮಾಲೀಕರಿಗೆ ಮಾತ್ರ ಕ್ರಯಪತ್ರ ಮಾಡಿಕೊಡಲಾಗುವುದು. 30 ವರ್ಷದಿಂದ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿರುವ ಬಡವರಿಗೆ ಈ ಅಕ್ರಮ ಸಕ್ರಮ ಯೋಜನೆ ಅನ್ವಯವಾಗಲಿದೆ. 1.1.2012 ಮುನ್ನ ಮನೆ ಕಟ್ಟಿರುವವರಿಗೆ ಮಾತ್ರ ಹಕ್ಕು ಪತ್ರ ದೊರೆಯಲಿದೆ ಎಂದು ತಿಳಿಸಿದರು.
ರಾಜ್ಯಾದ್ಯಂತ ಯುದ್ದೋಪಾದಿಯಲ್ಲಿ ಬಡವರಿಗೆ ಅಕ್ರಮ ಸಕ್ರಮ‌ ಯೋಜನೆಯಡಿ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ. ವಾರ್ಷಿಕ ಆದಾಯವನ್ನು ಪರಿಗಣಿಸಿ ಬಡವರೆಂದು ಗುರುತಿಸಿ ಹಕ್ಕುಪತ್ರ ವಿತರಿಸಲಾಗುವುದು. 94 ಸಿ ಮತ್ತು 94 ಸಿಸಿ ಕಾಯ್ದೆಯಡಿ ಬಡವರಿಗೆ ಹಕ್ಕು ಪತ್ರ ನೀಡುತ್ತೇವೆ ಎಂದರು.
ಯಾರಿಗೆ ಎಷ್ಟು ಶುಲ್ಕ:
20*30 ಅಳತೆಯ ಮನೆಗಳಿಗೆ ಹಕ್ಕುಪತ್ರ ಪಡೆಯಲು ಎಸ್ ಸಿ, ಎಸ್ ಟಿ ವರ್ಗದವರು 2,500 ರೂ. ನೋಂದಣಿ ಶುಲ್ಕ ನೀಡಬೇಕು. ಸಾಮಾನ್ಯ ವರ್ಗ 5 ಸಾವಿರ ರೂ. ಶುಲ್ಕ ಪಾವತಿಸಬೇಕು.
30*40 ನಿವೇಶನಗಳ ಮನೆಗಳಿಗೆ ಹಕ್ಕುಪತ್ರ ಪಡೆಯಲು ಎಸ್ ಸಿ, ಎಸ್ ಟಿ ವರ್ಗದವರು 5,000 ರೂ., ಸಾಮಾನ್ಯ ವರ್ಗದವರು 10,000 ರೂ. ಶುಲ್ಕ ಪಾವತಿಸಬೇಕು.
ಒಟ್ಟು ಬಂದಿರುವ ಅರ್ಜಿ:
ಅಕ್ರಮ ಸಕ್ರಮ ಯೋಜನೆಯಡಿ ರಾಜ್ಯಾದ್ಯಂತ ಒಟ್ಟು 2,53,000 ಅರ್ಜಿಗಳು ಬಂದಿದ್ದವು. ಅದರಲ್ಲಿ 60,061ಅರ್ಜಿಗಳಿಗೆ ಮಂಜೂರಾತಿ ದೊರಕಿದೆ. 1,47,456 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಹಾಗೂ 45,456 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ.
ಮುಂದಿನ ಹಂತದಲ್ಲಿ ಈ ಯೋಜನೆಯನ್ನು ರಾಜ್ಯವ್ಯಾಪಿ ವಿಸ್ತರಿಸುತ್ತೇವೆ. ಜನವರಿ 31ರಂದು ಮಂಗಳೂರು, ಬಳಿಕ ಬೀದರ್ ನಲ್ಲೂ ಹಕ್ಕುಪತ್ರ ವಿತರಿಸಲಾಗುತ್ತಿದೆ ಎಂದು ಇದೇ ವೇಳೆ ಅಶೋಕ್ ಸ್ಪಷ್ಟಪಡಿಸಿದರು.

Leave a Comment