ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ

ಬ್ಯಾಡಗಿ,ಮೇ.3- ಅನಾರೋಗ್ಯದಿಂದ ತ್ರಿಪುರಾದ ಆಸ್ಪತ್ರೆಯಲ್ಲಿ ಕಳೆದ ಬುಧವಾರದಂದು ನಿಧನರಾಗಿದ್ದ ತಾಲೂಕಿನ ಮೋಟೆಬೆನ್ನೂರು ಗ್ರಾಮದ ಸಿ.ಆರ್.ಪಿ.ಎಫ್. ಯೋಧ ಸುರೇಶ ಉಡಚಪ್ಪ ಹಾವನೂರ (೪೩) ಅವರ ಅಂತ್ಯಕ್ರಿಯೆಯನ್ನು ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಶನಿವಾರ ರಾತ್ರಿ ನೆರವೇರಿಸಲಾಯಿತು.
ಯೋಧನ ಪಾರ್ಥಿವ ಶರೀರವನ್ನು ತ್ರಿಪುರಾದಿಂದ ಬೆಳಗಾವಿಯ ಮೂಲಕ ಸ್ವಗ್ರಾಮ ಮೋಟೆಬೆನ್ನೂರಗೆ ತಂದು ಅವರ ನಿವಾಸದ ಎದುರು ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು. ಮನೆಯ ಬಳಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯು ಮೂರು ಸುತ್ತು ಕುಶಾಲ ತೋಪುಗಳನ್ನು ಹಾರಿಸುವ ಮೂಲಕ ಅಂತಿಮ ನಮನ ಸಲ್ಲಿಸಿದರು. ನಂತರ ಪಾರ್ಥಿವ ಶರೀರವನ್ನು ಮೆರವಣಿಗೆಯ ಮೂಲಕ ಗ್ರಾಮ ಪಂಚಾಯತಿ ಆವರಣಕ್ಕೆ ತಂದು ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರವನ್ನು ನಡೆಸಲಾಯಿತು.
ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಸುರೇಶಗೌಡ ಪಾಟೀಲ, ತಹಶೀಲ್ದಾರ ಶರಣಮ್ಮ ಕಾರಿ, ಜಿ ಪಂ. ಸದಸ್ಯೆ ಅನುಸೂಯಮ್ಮ ಕುಳೇನೂರ, ತಾ.ಪಂ. ಸದಸ್ಯೆ ಪೂರ್ಣಿಮಾ ಆನ್ವೇರಿ, ಎಪಿಎಂಸಿ ಸದಸ್ಯೆ ವನಿತಾ ಗುತ್ತಲ, ಗ್ರಾ.ಪಂ. ಅಧ್ಯಕ್ಷೆ ನೀಲಮ್ಮ ಬ್ಯಾಟಪ್ಪನವರ, ಮಾಜಿ ಸೈನಿಕ ಮಲ್ಲೇಶಪ್ಪ ಚಿಕ್ಕಣ್ಣನವರ, ತಾ ಪಂ. ಅಧಿಕಾರಿ ಅಬಿದ್ ಗದ್ಯಾಳ, ಸಿಪಿಐ ಭಾಗ್ಯವತಿ ಬಂತಿ, ಮುಖಂಡರಾದ ವೀರಯ್ಯ ಹಿರೇಮಠ, ಶಿವಬಸಪ್ಪ ಕುಳೇನೂರ ಹಾಗೂ ಮಾಜಿ ಯೋಧರು, ಗಣ್ಯರು,  ಗ್ರಾಮಸ್ಥರು ಸೇರಿದಂತೆ ಅನೇಕರು ಯೋಧನ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.

Share

Leave a Comment