ಸರ್ಕಾರಿ ಆಸ್ಪತ್ರೆಗಳ ಖಾಲಿ ಹುದ್ದೆಗಳ ಭರ್ತಿ 

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು,ಮಾ. ೨೦- ಸರಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ 1065 ತಜ್ಞರು ಹಾಗೂ 365 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಯನ್ನು ವಿಶೇಷ ನೇಮಕಾತಿಯನ್ವಯ ತುರ್ತಾಗಿ ಭರ್ತಿ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಆರೋಗ್ಯ ಸಚಿವ ಕೆ. ಆರ್. ರಮೇಶಕುಮಾರ ಅವರು ವಿಧಾನ ಪರಿಷತ್ ನಲ್ಲಿಂದು ತಿಳಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಎನ್.ಎಸ್.ಹಂಸರಾಜ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ತುರ್ತಾಗಿ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯದ ಸರಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರನ್ನು ತುಂಬುವುದೇ ಸವಾಲಿನ ಕೆಲಸವಾಗಿದೆ. ಈಗಾಗಲೇ ಲೋಕಸೇವಾ ಆಯೋಗದಿಂದ ಆಯ್ಕೆಯಾದ ತಜ್ಞ ವೈದ್ಯರಿಗೆ ಅವರು ಬಯಸಿದ ಆಸ್ಪತ್ರೆಗಳಿಗೆ ನೇಮಕಾತಿ ಪತ್ರ ನೀಡಬೇಕು. ಇಲ್ಲದಿದ್ದಲ್ಲಿ ಅವರು ಸೇವೆಗೆ ಹಾಜರಾಗುವುದೇ ಇಲ್ಲ ಎಂದು ಪರಿಸ್ಥಿತಿಯನ್ನು ಸದಸ್ಯರ ಗಮನಕ್ಕೆ ತಂದರು.

ಹೈದ್ರಾಬಾದ್ ಕರ್ನಾಟಕ ಪ್ರದೇಶದ ಆಸ್ಪತ್ರೆಗಳಲ್ಲಿ 1 ಲಕ್ಷದ 25 ಸಾವಿರ ರೂ. ನೀಡುವುದಾಗಿ ಹೇಳಿದ್ದರು. ತಜ್ಞ ವೈದ್ಯರು ಬರುತ್ತಿಲ್ಲ. ಖಾಸಗಿ ಆಸ್ಪತ್ರೆಯಲ್ಲಿರುವ ತಜ್ಞ ವೈದ್ಯರನ್ನು ದೂರವಾಣಿ ಕರೆಗಳ ಮೂಲಕ ಕರೆಯಿಸಿಕೊಂಡು ಚಿಕಿತ್ಸೆ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ರಾಜ್ಯದ 11 ಸರಕಾರಿ ಜಿಲ್ಲಾ ಆಸ್ಪತ್ರೆಗಳಲ್ಲಿ ಡಿಪ್ಲೋಮಾ ಕೋರ್ಸ್ ಗಳನ್ನು ಆರಂಭಿಸಲಾಗುವುದು ಎಂದರು.

ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮುಂದುವರೆದ ಆಸ್ಪತ್ರೆ ಎಂದು ಇನ್ನಷ್ಟು ಆರೋಗ್ಯ ಕೇಂದ್ರಗಳಲ್ಲಿ 2 ತಿಂಗಳಲ್ಲಿ ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.

 

Leave a Comment