ಸರ್ಕಾರಿ ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ರಕ್ತ

ಹುಳಿಯಾರು, ಆ. ೫- ಹೆರಿಗೆ, ಅಪಘಾತ, ಅನೀಮಿಯ, ಕ್ಯಾನ್ಸರ್ ಸೇರಿದಂತೆ ತುರ್ತು ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆ ಸೇರಿದಂತೆ ರಕ್ತನಿಧಿ ಕೇಂದ್ರಗಳಿರುವ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತವಾಗಿ ರಕ್ತ ನೀಡಲಾಗುವುದು ಎಂದು ತುಮಕೂರು ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಡಾ. ವೀಣಾ ತಿಳಿಸಿದರು.

ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ರಕ್ತನಿಧಿ ಕೇಂದ್ರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತನಿಧಿ ಕೇಂದ್ರ ತೆರೆದಿರುವುದರಿಂದ ತಾಲ್ಲೂಕಿನ ಮಂದಿ ರಕ್ತಕ್ಕಾಗಿ ತುಮಕೂರಿಗೆ ಬರುವುದು ತಪ್ಪಿದೆ. ಆದರೆ ಈ ಕೇಂದ್ರಕ್ಕೆ ತುಮಕೂರು ರಕ್ತನಿಧಿ ಕೇಂದ್ರದಿಂದಲೇ ರಕ್ತ ಸರಬರಾಜು ಮಾಡುತ್ತಿದ್ದು, ಸ್ಥಳೀಯವಾಗಿಯೇ ದಾನಿಗಳ ರಕ್ತ ಸಿಕ್ಕದೆ ತುರ್ತು ಸಂದರ್ಭದಲ್ಲಿ ನೆರವಾಗುತ್ತದೆ. ಈ ನಿಟ್ಟಿನಲ್ಲಿ ಕಾಲೇಜು ಹಾಗೂ ಸಂಘ ಸಂಸ್ಥೆಗಳು ಸಾರ್ವಜನಿಕವಾಗಿ ರಕ್ತದಾನ ಶಿಬಿರ ಏರ್ಪಡಿಸಿ ರಕ್ತ ಸಂಗ್ರಹಿಸಿ ಕೊಟ್ಟರೆ ರಕ್ತನಿಧಿ ಕೇಂದ್ರಗಳಿಗೆ ನೆರವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಹಿಮಶ್ವೇತ, ಆಯುಷ್ ವೈದ್ಯರಾದ ಡಾ. ಚಂದನಾ, ಹಿರಿಯ ಆರೋಗ್ಯ ಸಹಾಯಕರಾದ ಸಿ.ಬಿ. ವೆಂಕಟರಾಮಯ್ಯ, ಪಿ.ಎನ್. ಚಂದ್ರಶೇಖರ್, ಐಸಿಟಿಸಿಯ ನವೀನ್, ಧನಂಜಯ್ಯ ಮತ್ತಿತರರು ಉಪಸ್ಥಿತರಿದ್ದರು.

Leave a Comment