ಸರ್ಕಾರಿ ಆದೇಶದಂತೆ ಟಿಪ್ಪು ಜಯಂತಿ ಆಚರಣೆ

ಅರಸೀಕೆರೆ, ನ. ೯- ಸರ್ಕಾರದ ಆದೇಶದಂತೆ ನ. 10 ರಂದು ಬೆಳಿಗ್ಗೆ ತಾಲ್ಲೂಕು ಕಚೇರಿ ಆವರಣದಲ್ಲಿ ಟಿಪ್ಪು ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ತಹಶೀಲ್ದಾರ್ ಎಂ.ವಿ. ನಟೇಶ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಶಾಸಕ ಕೆ.ಎನ್. ಶಿವಲಿಂಗೇಗೌಡ ಮಾತನಾಡಿ, ಕ್ಷೇತ್ರದ ಎಲ್ಲಾ ಸಮುದಾಯಗಳ ಮುಖಂಡರ ವಿಶ್ವಾಸಕ್ಕೆ ತೆಗೆದುಕೊಂಡು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮೂಲಕ ಎಲ್ಲ ಮಹಾಪುರುಷರ ಜಯಂತಿ ಲೋಪ ದೋಷವಿಲ್ಲದೆ ಅರ್ಥಪೂರ್ಣವಾಗಿ ನಡೆಸಿಕೊಂಡು ಬರುತ್ತಿದ್ದೇವೆ ಎಂದರು.

ನಗರದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಮುಸ್ಲಿಂರ ಜತೆ ಟಿಪ್ಪು ಜಯಂತಿಗೆ ಉತ್ತಮ ಕಾರ್ಯಕ್ರಮ ಆಯೋಜನೆ ಮಾಡುವ ಉದ್ದೇಶ ನಮ್ಮದಾಗಿತ್ತು. ಆದರೆ ಸರ್ಕಾರ ಕಾರಣಾಂತರಗಳಿಂದ ಜಯಂತಿ ಆಚರಣೆಗೆ ಕೆಲವು ಸೂಚನೆ ನೀಡಿರುವ ಕಾರಣ ಸರಳವಾಗಿ ಆಚರಿಸಲಾಗುವುದು ಎಂದರು. ಮುಂದಿನ ದಿನಗಳಲ್ಲಿ ಪ್ರತ್ಯೇಕವಾಗಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಸುತ್ತೇವೆ. ಆದ್ದರಿಂದ ನ. 10 ರಂದು ನಡೆಯುವ ಟಿಪ್ಪು ಜಯಂತಿಗೆ ಮುಸ್ಲಿಂ ಸೇರಿದಂತೆ ವಿವಿಧ ಸಮಾಜದ ಮುಖಂಡರು, ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ತಹಶೀಲ್ದಾರ್ ನಟೇಶ್ ಮಾತನಾಡಿ, ಸರ್ಕಾರದ ಆದೇಶದಂತೆ ನಗರದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲು ಮುಸ್ಲಿಂ ಸೇರಿದಂತೆ ಎಲ್ಲಾ ಸಮುದಾಯಗಳ ಸಹಕಾರ ಅಗತ್ಯವಾಗಿದೆ. ನಗರದಲ್ಲಿ ಯಾವುದೇ ಮೆರವಣಿಗೆ ನಡೆಸಲು ಅವಕಾಶವಿಲ್ಲ. ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು, ತಾವೆಲ್ಲರೂ ಭಾಗವಹಿಸಬೇಕು ಎಂದು ಕೋರಿದರು.

ನಗರಸಭೆ ಮಾಜಿ ಅಧ್ಯಕ್ಷ ಎಂ. ಸಮೀವುಲ್ಲಾ ಮಾತನಾಡಿ, ತಾಲ್ಲೂಕು ಆಡಳಿತ ಎಲ್ಲ ಜಾತಿ ಜನಾಂಗದ ಮಹಾಪುರುಷರ ಜಯಂತಿ ಕಾರ್ಯಕ್ರಮವನ್ನು ಸಮಾಜದ ಮುಖಂಡರ ಸೂಕ್ತ ಸಲಹೆ ಸಹಕಾರ ಪಡೆಯುವ ಮೂಲಕ ಅದ್ದೂರಿಯಾಗಿ ಆಚರಣೆ ಮಾಡುತ್ತೇವೆ. ಆದರೆ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಏಕಾಏಕಿ ಸರ್ಕಾರ ಆದೇಶ ನೀಡಿರುವುದು ಸರಿಯಲ್ಲ ಎಂದರು.

ಮುಸ್ಲಿಂ ಜಮಾತ್ ಎ ಸಮಿತಿ ಅಧ್ಯಕ್ಷ ಸೈಯದ್ ಸರ್ದಾರ್  ಭಾಷಾ ಮಾತನಾಡಿ, ಟಿಪ್ಪು ಜಯಂತಿ ಸರಳವಾಗಿ ಆಚರಣೆ ಮಾಡುವುದಾದರೆ ತಾಲ್ಲೂಕು ಆಡಳಿತ ಮುಸ್ಲಿಂ ಸಮಾಜಕ್ಕೆ ಪೂರ್ವಭಾವಿ ಸಭೆ ಕರೆಯುವ ಅಗತ್ಯವಿಲ್ಲ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ತಮ್ಮೆಲ್ಲರ ಸಹಕಾರ ಯಾವಾಗಲೂ ನೀಡುವುದಾಗಿ ತಿಳಿಸಿದರು.

ಸಭೆಯಲ್ಲಿ ತಾ.ಪಂ. ಅಧ್ಯಕ್ಷೆ ರೂಪ ಗುರುಮೂರ್ತಿ, ಉಪಾಧ್ಯಕ್ಷ ಲಿಂಗರಾಜ್, ಜಿ.ಪಂ. ಸದಸ್ಯ ಪಟೇಲ್ ಶಿವಪ್ಪ, ಡಿವೈಎಸ್‌ಪಿ ಸದಾನಂದ ತಿಪ್ಪಣ್ಣನವರ್, ವೃತ್ತ ನಿರೀಕ್ಷಕ ರಂಗಸ್ವಾಮಿ ಮತ್ತಿತರರು  ಭಾಗವಹಿಸಿದ್ದರು.

Leave a Comment