ಸರ್ಕಾರದ ವಿರುದ್ಧ ಕೆರಳಿದ ಮತ್ತೊಬ್ಬ ಕಾಂಗ್ರೆಸ್ ಶಾಸಕ

ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ಮಾಡುವುದನ್ನು ಕಾಂಗ್ರೆಸ್ ಹಿರಿಯ ಶಾಸಕ ಹೆಚ್.ಕೆ. ಪಾಟೀಲ್ ತೀವ್ರವಾಗಿ ವಿರೋಧಿಸಿದ್ದಾರೆ. ವಿರೋಧಪಕ್ಷ ಬಿಜೆಪಿ ಆಹೋರಾತ್ರಿ ಹೋರಾಟ ನಡೆಸಿದೆ.

ಜಿಂದಾಲ್ ಗೆ ಭೂಮಿ ಪರಭಾರೆ ಮಾಡುವ ವಿಚಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಸಂಪುಟ ಉಪ ಸಮಿತಿ ಪುನರ್ ಪರಿಶೀಲನೆಗೆ ತೀರ್ಮಾನಿಸಲಾಗಿದೆ. ವಿರೋಧ ಪಕ್ಷದವರಿರಲಿ, ಆಡಳಿತ ಪಕ್ಷದ ಶಾಸಕರೇ ಜಿಂದಾಲ್ ಗೆ ಭೂಮಿ ನೀಡಲು ತೀವ್ರ ವಿರೋಧ ವ್ಯಕ್ತಪಡಿಸಿರುವುದು ದೋಸ್ತಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ.

ಹೆಚ್.ಕೆ. ಪಾಟೀಲ್ ಅವರ ಬಳಿಕ ಮತ್ತೊಬ್ಬ ಕಾಂಗ್ರೆಸ್ ಶಾಸಕ ದೋಸ್ತಿ ಸರ್ಕಾರದ ವಿರುದ್ಧ ಕೆರಳಿದ್ದಾರೆ. ಶಾಸಕ ಆನಂದ್ ಸಿಂಗ್ ಅವರು, ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.

ಸರ್ಕಾರದ ನಿರ್ಧಾರ ಸರಿ ಇಲ್ಲ. ಜಿಂದಾಲ್ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಇದ್ದಂತೆ. ಸ್ಥಳೀಯರನ್ನು ಗುಲಾಮರನ್ನಾಗಿಸಿ ದುಡಿಸಿಕೊಳ್ಳುತ್ತಿದೆ. ಕಂಪನಿಯಿಂದ ಸ್ಥಳೀಯರಿಗೆ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಸರ್ಕಾರ ರೈತರ ಜಮೀನು ಮಾರಾಟ ಮಾಡಬಾರದು ಎಂದು ಆಗ್ರಹಿಸಿದ್ದಾರೆ.

ಜಿಂದಾಲ್ ಗೆ ಭೂಮಿ ನೀಡುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಜಿಂದಾಲ್ ನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲಾಗುವುದು. ಜಿಲ್ಲೆಯ ಜನರ ಹಿತಕ್ಕಾಗಿ ಹೋರಾಟದಲ್ಲಿ ಭಾಗಿಯಾಗುತ್ತೇನೆ. ನನ್ನ ನಿರ್ಧಾರಕ್ಕೆ ನಾನು ಬದ್ಧವಾಗಿದ್ದು, ಅನೇಕರು ಬೆಂಬಲ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಜಿಂದಾಲ್ ಗೆ ಯಾವುದೇ ಕಾರಣಕ್ಕೂ ಭೂಮಿ ಕೊಡಬಾರದು. ಗುತ್ತಿಗೆ ಆಧಾರದಲ್ಲಿ ಜಮೀನು ಕೊಡಲು ವಿರೋಧವಿಲ್ಲ, ಆದರೆ, ಯಾವುದೇ ಕಾರಣಕ್ಕೂ ಭೂಮಿಯನ್ನು ಮಾರಾಟ ಮಾಡಬಾರದು. ಬೆಂಗಳೂರಿನಲ್ಲಿ ಕಾರ್ಖಾನೆ ಆರಂಭಿಸುವುದಾಗಿ ಜಮೀನು ಪಡೆದ ಜಿಂದಾಲ್ ರಿಯಲ್ ಎಸ್ಟೇಟ್ ನಡೆಸುತ್ತಿದೆ ಎಂದು ದೂರಿದ್ದಾರೆ.

Leave a Comment