ಸರ್ಕಾರದ ಪರ ಮತಚಲಾಯಿಸಲು ಅತೃಪ್ತರಿಗೆ ಮನವಿ

ದಾವಣಗೆರೆ.ಜು.17; ಅತೃಪ್ತ ಶಾಸಕರ ರಾಜೀನಾಮೆಯನ್ನು ಅಂಗೀಕರಿಸುವ ಹಕ್ಕನ್ನು ಸ್ಪೀಕರ್ ವಿವೇಚನೆಗೆ ಬಿಡುವ ಮೂಲಕ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಸುಪ್ರೀಂ ಕೋರ್ಟ್ ಗೌರವ ನೀಡಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಕೆಎಸ್‍ಐಸಿ ಮಾಜಿ ಅಧ್ಯಕ್ಷ ಡಿ. ಬಸವರಾಜ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು ನಾಳೆ ನಡೆಯಲಿರುವ ಸರ್ಕಾರದ ವಿಶ್ವಾಸಮತಯಾಚನೆ ಸಂದರ್ಭದಲ್ಲಿ ಅತೃಪ್ತ ಶಾಸಕರು ಸದನಕ್ಕೆ ಹಾಜರಾಗಿ ಸರ್ಕಾರದ ಪರ ಮತ ಚಲಾಯಿಸಲು ಆ ಮೂಲಕ ಮತದಾರರ ಮತ್ತು ರಾಜ್ಯದ ಗೌರವ ಕಾಪಾಡಬೇಕು.ಕೋಮುವಾದಿ ಬಿಜೆಪಿ ಕುತಂತ್ರಕ್ಕೆ ಬಲಿಯಾಗದಿರಲು ಅತೃಪ್ತ ಶಾಸಕರಲ್ಲಿ ಅವರು ವಿನಂತಿಸಿದ್ದಾರೆ. ಲೋಕಸಭೆಯಲ್ಲಿ ಜನತೆ ನೀಡಿದ ತೀರ್ಪನ್ನು ಪ್ರಧಾನಮಂತ್ರಿ ಮತ್ತು ಗೃಹಸಚಿವರು ದುರ್ಬಳಕೆ ಮಾಡಿ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸಲು ಭ್ರಷ್ಟಚಾರದಿಂದಗಳಿಸಿದ ಹಣ ಚೆಲ್ಲುತ್ತಿದ್ದಾರೆ. ಶಾಸಕರಿಗೆ ಕೋಟಿ ಕೋಟಿ ಹಣ ನೀಡಿ, ಕೆಲ ಶಾಸಕರಿಗೆ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಕೇಂದ್ರ ತನಿಖಾ ದಳಗಳಿಂದ ದಾಳಿಯಂತಹ ಅಸ್ತ್ರಗಳನ್ನು ಬಳಸಿ ಬೆದರಿಕೆವೊಡ್ಡಿ ಅಪರೇಷನ್ ಕಮಲ ಮಾಡುತ್ತಿದ್ದಾರೆ. ಜನಾದೇಶವನ್ನು ಜನ ಸೇವೆಗೆ ಬಳಸದೇ ಜನಪ್ರತಿನಿಧಿಗಳನ್ನು ಖರೀದಿಸಲು ಮುಂದಾಗಿದ್ದಾರೆ. ಕರ್ನಾಟಕ ಹಾಗೂ ಮಧ್ಯಪ್ರದೇಶದಲ್ಲಿ ಶಾಸಕರ ಖರೀದಿಗೆ ಮುಂದಾಗಿದ್ದಾರೆ. ಈ ಹಿಂದೆಯೂ ಅಪರೇಷನ್ ಕಮಲ ಮಾಡಿ ಅಧಿಕಾರ ಹಿಡಿದು 5 ವರ್ಷಗಳಲ್ಲಿ 3 ಜನ ಮುಖ್ಯಮಂತ್ರಿಗಳ ಆದರು. ಬಿ.ಎಸ್. ಯಡಿಯೂರಪ್ಪ ಆದಿಯಾಗಿ 14 ಜನ ಮಂತ್ರಿಗಳು ಶಾಸಕರು ಜೈಲಿಗೆ ಹೋಗಿದ್ದು ಇತಿಹಾಸ, ಮತ್ತೆ ಇದೀಗ ರಾಜ್ಯದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ ಅಧಿಕಾರ ಹಿಡಿಯಲು ಮುಂದಾಗಿರುವುದು ಖಂಡನೀಯ. ಅತೃಪ್ತರ ಪರ ವಾದ ಮಾಡಲು ನ್ಯಾಯವಾದಿಗಳಿಗೆ ಬಿಜೆಪಿಯೇ ಹಣ ಪಾವತಿಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಪ್ರತಿಪಕ್ಷವಾಗಿ ರಚನಾತ್ಮಕವಾಗಿ ಕೆಲಸ ಮಾಡಬೇಕಿದ್ದ ಬಿಜೆಪಿ ಅದನ್ನು ಧಿಕ್ಕರಿಸಿ ಜನಪ್ರತಿನಿಧಿಗಳ ಖರೀದಿ ಮಾಡಲು ತೊಡಗಿದೆ. ಸ್ಪೀಕರ್ ರಮೇಶ್‍ಕುಮಾರ್‍ರವರು ಅತೃಪ್ತ ಶಾಸಕರು ಏನಾದರೂ ಬಿಜೆಪಿಯ ಕುತಂತ್ರಕ್ಕೆ ಬಲಿಯಾದರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಿ ದೇಶಕ್ಕೆ ಸಂದೇಶ ನೀಡಬೇಕೆಂದು ಒತ್ತಾಯಿಸಿದರು. ಬಿಜೆಪಿಗೆ ಕುರ್ಚಿ ಬೇಕಾಗಿದೆ ವಿನಹ ಅವರಿಗೆ ಅತೃಪ್ತ ಶಾಸಕರ ಸದಸ್ಯತ್ವ ರದ್ದಾದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಈ ವಾಸ್ತವ ಸತ್ಯವನ್ನು ಅರಿತು ಅತೃಪ್ತ ಶಾಸಕರು ಸರ್ಕಾರದ ಪರ ಮತಚಲಾಯಿಸಬೇಕೆಂದು ವಿನಂತಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಎಸ್. ನಂಜ್ಯನಾಯ್ಕ್, ಮುಖಂಡರಾದ ಅಲ್ಲಾವಲಿ ಘಾಜಿಖಾನ್, ಲಿಯಾಖತ್ ಅಲಿ, ಹೆಚ್. ಹರೀಶ್, ಡಿ. ಶಿವಕುಮಾರ್, ಅಬ್ದುಲ್ ಜಬ್ಬಾರ್, ಮಂಜುನಾಥ್ ಹಾಜರಿದ್ದರು.
ಬಾಕ್ಸ್
ಹಿಂದೆ ಸ್ವತಂತ್ರ ಹೋರಾಟದಲ್ಲಿ ಹೋರಾಡಿ ಜೈಲು ಸೇರಿ ಸಂಸತ್ ಮತ್ತು ವಿಧಾನ ಸಭೆಗೆ ನಾಯಕರು ಬರುತ್ತಿದ್ದರು. ಈಗ ಮೋದಿ ಆಡಳಿತದಲ್ಲಿ ಭ್ರಷ್ಟಚಾರ ಮಾಡಿ ನಕಲಿ ಎನ್‍ಕೌಂಟರ್ ಸೇರಿದಂತೆ ಹಲವು ಅಪರಾಧಗಳನ್ನು ಮಾಡಿ ಜೈಲಿನಲ್ಲಿ ಮುದ್ದೆ ಮುರಿದು ನಂತರ ವಿಧಾನ ಸಭೆ, ಸಂಸತ್‍ನತ್ತ ಕೆಲವರು ಬರುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಕೇಂದ್ರದಲ್ಲಿ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಗಂಡಾಂತರ ಎದುರಾಗಿದೆ. ಅಪರೇಷನ್ ಕಮಲ ದೇಶದ ಹಲವು ರಾಜ್ಯಗಳಲ್ಲಿ ನಿರಂತರವಾಗಿ ನಡೆಯುತ್ತಾ ಬಂದಿದೆ. ಡಿ. ಬಸವರಾಜ್ ಕೆಪಿಸಿಸಿ ಕಾರ್ಯದರ್ಶಿ.

Leave a Comment