ಸರ್ಕಾರದ ಕ್ರಮಗಳ ವಿವರ: ಬಿಎಸ್‌ವೈಗೆ ಎಚ್‌ಡಿಕೆ ಪತ್ರ

ಬೆಂಗಳೂರು, ಜೂ. ೧೬- ರಾಜ್ಯದಲ್ಲಿ ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿರುವುದು, ರೈತರ ಸಾಲಮನ್ನಾ ಯೋಜನೆ ಗೊಂದಲ ಹಾಗೂ ಜಿಂದಾಲ್ ಸಂಸ್ಥೆಗೆ ಭೂಮಿ ಪರಭಾರೆ ಪ್ರತಿಭಟಿಸಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ನಡೆಸಿರುವ ಆಹೋರಾತ್ರಿ ಧರಣಿಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಎಲ್ಲ ವಿಚಾರಗಳ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಿ ಯಡಿಯೂರಪ್ಪನವರಿಗೆ ಸಚಿವ ವೆಂಕಟರಾವ್ ನಾಡಗೌಡರ ಮೂಲಕ ಧರಣಿ ನಿರತ ಸ್ಥಳಕ್ಕೆ ಪತ್ರ ಕಳುಹಿಸಿದ್ದಾರೆ.
ಕಳೆದ ಎರಡು ದಿನಗಳಿಂದ ನಗರದ ಮೌಲ್ಯ ಸರ್ಕಲ್‌ನಲ್ಲಿ ಆಹೋರಾತ್ರಿ ಧರಣಿ ನಡೆಸಿರುವ ಯಡಿಯೂರಪ್ಪನವರನ್ನು ಧರಣಿ ಸ್ಥಳದಲ್ಲಿ ಭೇಟಿಯಾದ ಸಚಿವ ವೆಂಕಟರಾವ್ ನಾಡಗೌಡ, ದೆಹಲಿಯಲ್ಲಿರುವ ಮುಖ್ಯಮಂತ್ರಿಗಳು ತಮಗೆ ಪತ್ರ ತಲುಪಿಸಲು ಹೇಳಿದ್ದಾರೆ ಎಂದು ಮುಖ್ಯಮಂತ್ರಿಗಳ ಪತ್ರವನ್ನು ನೀಡಿದರು.
ರೈತರ ಸಾಲಮನ್ನಾ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲಾಗುತ್ತಿದೆ. ಜಿಂದಾಲ್ ಸಂಸ್ಥೆಗೆ ಭೂಮಿ ಮಾರಾಟ ಕುರಿತಂತೆ ಪುನರ್ ವಿಮರ್ಶೆಗೆ ಸಚಿವ ಸಂಪುಟದಲ್ಲಿ ಉಪಸಮಿತಿಯನ್ನು ರಚಿಸಲಾಗುವುದು ಎಂದು ಅವರು ಪತ್ರದಲ್ಲಿ ಹೇಳಿ, ನಿಮ್ಮ ನಾಯಕತ್ವದಲ್ಲಿ ನಡೆದಿರುವ ಆಹೋರಾತ್ರಿ ಧರಣಿಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಇಸಿದೆ. ಈ ಎಲ್ಲ ವಿಚಾರಗಳ ಬಗ್ಗೆ ಚರ್ಚಿಸಲು ನಾನು ಸದಾ ಸಿದ್ಧನಿದ್ದೇನೆ. ಚರ್ಚಿಸಲು ಸಮಯ ನೀಡಿ ಎಂದು ಅವರು ಪತ್ರದಲ್ಲಿ ಯಡಿಯೂರಪ್ಪನವರಿಗೆ ಕೋರಿದ್ದಾರೆ.
 ವೆಂಕಟರಾವ್ ನಾಡಗೌಡ ಹೇಳಿಕೆ
ಮುಖ್ಯಮಂತ್ರಿಗಳ ಪತ್ರ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ವೆಂಕಟರಾವ್ ನಾಡಗೌಡ, ಮುಖ್ಯಮಂತ್ರಿಗಳು ದೆಹಲಿಯಲ್ಲಿದ್ದು, ಯಡಿಯೂರಪ್ಪನವರಿಗೆ ಈ ಪತ್ರ ತಲುಪಿಸುವಂತೆ ಸೂಚನೆ ನೀಡಿದ್ದರು ಅದರಂತೆ ಪತ್ರ ತಲುಪಿಸಿದ್ದೇನೆ. ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದೇನೆ ಎಂದರು.
ಬಿಜೆಪಿ ಆಕ್ಷೇಪ
ಸಚಿವ ವೆಂಕಟರಾವ್ ನಾಡಗೌಡ ಮುಖ್ಯಮಂತ್ರಿಗಳ ಪತ್ರವನ್ನು ಯಡಿಯೂರಪ್ಪನವರಿಗೆ ತಲುಪಿಸಿದ ನಂತರ ಮಾತನಾಡಿದ ಬಿಜೆಪಿ ವಕ್ತಾರ ಹಾಗೂ ಶಾಸಕ ಸುರೇಶ್‌ಕುಮಾರ್, ಮುಖ್ಯಮಂತ್ರಿ ಕುಮಾರಸ್ವಾಮಿ ಶಾಸ್ತ್ರಕ್ಕಾಗಿ ಪತ್ರ ಕಳುಹಿಸಿದ್ದಾರೆ. ಯಡಿಯೂರಪ್ಪನವರು ಪ್ರತಿಭಟನೆ ಮಾಡುವುದಿಲ್ಲ, ಅವರ ಪ್ರತಿಭಟನೆಯಿಂದ ಏನಾಗುವುದಿಲ್ಲ ಎಂದು ಅಂದುಕೊಂಡಿದ್ದರು. ಯಡಿಯೂರಪ್ಪನವರು ಪ್ರತಿಭಟನೆ ಮಾಡಿದರೆ ವಿಧಾನಸೌಧವೇ ನಡುಗುತ್ತದೆ ಎಂದು ಮುಖ್ಯಮಂತ್ರಿಗಳಿಗೆ ಅರ್ಥವಾಗಿದೆ. ಎರಡು ದಿನಗಳಿಂದ ಧರಣಿ ನಡೆಸಿದರೂ ಸುಮ್ಮನಿದ್ದ ಮುಖ್ಯಮಂತ್ರಿಗಳು ಈಗ ಶಾಸ್ತ್ರಕ್ಕೆ ಪತ್ರ ಕಳುಹಿಸಿದ್ದಾರೆ ಎಂದು ಆಕ್ಷೇಪಿಸಿ, ತಮ್ಮ ಹೋರಾಟ ನಿಲ್ಲದು ಎಂದರು.

Leave a Comment