ಸರ್ಕಾರದ ಆದೇಶ ಅನುಷ್ಟಾನಗೊಳಿಸಲು ಒತ್ತಾಯ

ದಾವಣಗೆರೆ, ಆ. 24 – ಜಿಲ್ಲಾ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಗ್ರಾ.ಪಂ ಕಾರ್ಯದರ್ಶಿಗಳು ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು ಸರ್ಕಾರದ ಮಾರ್ಗಸೂಚಿಗಳಿಗೆ ವಿರುದ್ದವಾಗಿ ನಿಯೋಜನೆ ಮಾಡಲಾಗಿದೆ. ಈ ಬಗ್ಗೆ ಜಿ.ಪಂ ಸಿಇಓಗೆ ದೂರು ನೀಡಿದರು ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಭ್ರಷ್ಟಾಚಾರ ವಿರೋಧಿ ವೇದಿಕೆ ರಾಜ್ಯ ಉಪಾಧ್ಯಕ್ಷ ಎ.ಉಮೇಶ್ ದೂರಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಮೂಲಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸದೇ ಇಚ್ಚಾನುಸಾರ ಕೆಲಸ ಮಾಡಲಾಗುತ್ತಿದೆ. ಸರ್ಕಾರದ ಆದೇಶವಿದ್ದರು ಸಹ ಅದನ್ನು ಅನುಷ್ಟಾನಗೊಳಿಸಿಲ್ಲ, ಈ ಹಿಂದಿನ ಸಿಇಓ ಆಗಿದ್ದ ಅಶ್ವತಿ ಅವರಿಗೆ ಮನವಿ ಸಲ್ಲಿಸಿದ್ದೇವು. ಆದರು ಸಹ ಯಾವುದೇ ಕ್ರಮಕೈಗೊಂಡಿರಲಿಲ್ಲ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಇಓ ಹೆಚ್.ಬಸವರಾಜೇಂದ್ರ ಅವರಿಗೂ ಸಹ ತಿಳಿಸಿದ್ದೇವೆ. ಆದರೂ ಪ್ರಯೋಜನವಾಗಿಲ್ಲ, ಹೊರ ಜಿಲ್ಲೆಗಳಲ್ಲಿ ಜಿಲ್ಲೆಯಿಂದ ಜಿಲ್ಲೆಗೆ ಸರ್ಕಾರದ ವತಿಯಿಂದ ಮಾಡಲಾದ ಆದೇಶದಂತೆ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಗ್ರಾ.ಪಂ ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳ ನಿಯೋಜಕರನ್ನು ಕೂಡಲೇ ರದ್ದುಪಡಿಸಿ ಮೂಲಸ್ಥಾನದಲ್ಲಿ ವರದಿ ಮಾಡಿಕೊಳ್ಳಲು ಆದೇಶವಿದೆ. ಆದರೆ ಇದನ್ನು ಅನುಷ್ಟಾನಗೊಳಿಸಿಲ್ಲ, ಇದರಿಂದಾಗಿ ಬಡವರು ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರೆಯುತ್ತಿಲ್ಲ, ಆಡಳಿತ ದುರುಪಯೋಗವಾಗುತ್ತಿದೆ. ಆದೇಶ ಬಂದು 8 ತಿಂಗಳಾದರು ಸಹ ಅನುಷ್ಟಾನಕ್ಕೆ ಮೇಲಾಧಿಕಾರಿಗಳು ಮುಂದಾಗಿಲ್ಲದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದರ ಹಿಂದೆ ಹಣ ದುರುಪಯೋಗ ಮಾಡುವ ಹುನ್ನಾರವಿದೆ. ಪಾರದರ್ಶಕ ಆಡಳಿತ ನಡೆಸಲ ಹಿನ್ನಡೆಯಾಗುತ್ತಿದೆ. ಆದ್ದರಿಂದ ಈ ಕೂಡಲೇ ಸರ್ಕಾರದ ಆದೇಶದ ಅನುಸಾರ ಜಿ.ಪಂ ಅಭಿವೃದ್ದಿ ಅಧಿಕಾರಿಗಳು, ಗ್ರಾ.ಪಂ ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳನ್ನು ನಿಯೋಜನೆ ಮಾಡಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಟಿಯಲ್ಲಿ ಡಾ.ಉಮೇಶ್ ಹಿರೇಮಠ್, ಎಸ್.ಆರ್.ಚಿಕ್ಕನಗೌಡ, ಪ್ರಸನ್ನಕುಮಾರ್ ಕುಂದೂರು, ಶಂಭುಲಿಂಗಪ್ಪ ರಾಗಿಮಸಲವಾಡ, ಹರೀಶ್ ಹಳ್ಳಿ ಇದ್ದರು.

Leave a Comment