ಸರ್ಕಾರಕ್ಕೆ ಜಾರಕಿಹೊಳಿ ಎಚ್ಚರಿಕೆ

ಅರಭಾವಿ(ಬೆಳಗಾವಿ), ಆ. ೧೩- ಪ್ರವಾಹದಿಂದ ನೊಂದವರಿಗೆ ಆಗತ್ಯ ನೆರವು ನೀಡದಿದ್ದರೆ ಈ ಸರ್ಕಾರವನ್ನೇ ಕೆಡವುತ್ತೇನೆ ಎಂದು ಆಡಳಿತರೂಢಾ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ತಮ್ಮ ಸ್ವಕ್ಷೇತ್ರದ ಅರಭಾವಿಯಲ್ಲಿ ಪ್ರವಾಹದಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಬೇಟಿ ನೀಡಿ ಸಂತ್ರಸ್ಥರಿಗೆ ಸಾಂತ್ವಾನ ಹೇಳಿದ ಸಂದರ್ಭದಲ್ಲಿ ಅವರು, ಪ್ರವಾಹದಿಂದ ಮನೆ ಕಳೆದುಕೊಂಡಿರುವ ನಿಮಗೆಲ್ಲರಿಗೂ ಮನೆ ಕಟ್ಟಿಸಿಕೊಡುವುದು ನನ್ನ ಜವಾಬ್ದಾರಿ. ಸರ್ಕಾರ ಮನೆ ಕಟ್ಟಿಸಿಕೊಡದಿದ್ದರೆ ಸರ್ಕಾರವನ್ನೇ ಕೆಡವುತ್ತೇನೆ. ಭಯ ಬೇಡ ನಿಮಗೆಲ್ಲರಿಗೂ ಮನೆ ಕಟ್ಟಿಸಿಯೇ ತೀರುತ್ತೇನೆ ಎಂದು ಪ್ರತಿಜ್ಞೆಯ ದಾಟಿಯಲ್ಲಿ ಮಾತನಾಡಿದ್ದಾರೆ.
ಸರ್ಕಾರವನ್ನು ಉರುಳಿಸುವ ಶಕ್ತಿ ಸಾಮರ್ಥ್ಯ ನನಗಿದೆ. ಹಾಗಾಗಿ ಸರ್ಕಾರ ಮನೆ ಕಟ್ಟಿಕೊಡದಿದ್ದರೆ ಆ ಸರ್ಕಾರವನ್ನೇ ಉರುಳಿಸಿಬಿಡುತ್ತನೆ ಎಂದು ಯಡಿಯೂರಪ್ಪ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಪ್ರವಾಹ ಸಂಸ್ರತ್ಥರ ಪರಿಸ್ಥಿತಿ ಕಂಡು ಮಮ್ಮಲ ಮರುಗಿರುವ ಬಾಲಚಂದ್ರ ಜಾರಕಿಹೊಳಿ, ಭಾವೋದ್ವೇಗಕ್ಕೊಳಗಾಗಿ ಸರ್ಕಾರವನ್ನೇ ಕೆಡವಿ ಬಿಡುತ್ತನೆ ಎಂಬ ದಾಟಿಯಲ್ಲಿ ಮಾತನಾಡಿರುವುದು ಆಡಳಿತರೂಢಾ ಬಿಜೆಪಿಗೆ ಶಾಕ್ ನೀಡಿದಂತಾಗಿದೆ.
ಬಾಲಚಂದ್ರ ಜಾರಕಿಹೊಳಿ ಅವರ ಈ ಹೇಳಿಕೆ ಬಿಜೆಪಿಯಲ್ಲಿ ನಾನಾ ಚರ್ಚೆಗೆ ಕಾರಣವಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ಈಗಾಗಲೇ ಬೆಳಗಾವಿಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ಅಹವಾಲು ಆಲಿಸಿ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದರೂ ಶಾಸಕ ಬಾಲಚಂದ್ರಜಾರಕಿಹೊಳಿ ಮಾತನಾಡಿರುವ ದಾಟಿ ಬಿಜೆಪಿ ನಾಯಕರಲ್ಲಿ ಅಚ್ಚರಿ ಮೂಡಿಸಿದೆ.
ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾವರನ್ನು ಉರುಳಿಸುವಲ್ಲಿ ಬಾಲಚಂದ್ರ ಜಾರಕಿಹೊಳಿ ತೆರೆಯ ಹಿಂದೆ ನಿಂತು ಮಹತ್ವದ ಪಾತ್ರ ವಹಿಸಿದ್ದರು ಎಂದು ಹೇಳಲಾಗಿತ್ತು.
ಕಾಂಗ್ರೆಸ್-ಜೆಡಿಎಸ್‌ನ ಹಲವು ಶಾಸಕರ ರಾಜೀನಾಮೆ ಹಿಂದೆ ಬಾಲಚಂದ್ರ ಜಾರಕಿಹೊಳಿ ಕೆಲಸ ಮಾಡಿದ್ದರು ಎಂದು ಹೇಳಲಾಗಿತ್ತು. ಈಗ ಅದೇ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರವನ್ನು ಕೆಡವಿಸುತ್ತೇನೆ ಎಂದು ಮಾತನಾಡಿರುವುದು ರಾಜಕೀಯ ವಲಯದಲ್ಲಿ ನಾನಾ ರೀತಿಯ ಚರ್ಚೆಗೆ ಕಾರಣವಾಗಿದೆ.

Leave a Comment