ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ಹಿಡಿತವೇ ಇಲ್ಲ : ಶೆಟ್ಟರ್

ಹುಬ್ಬಳ್ಳಿ : ರಾಜ್ಯದಲ್ಲಿ ದಕ್ಷ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದ್ದು,ಕಾನೂನು ಸುವ್ಯವಸ್ಥೆ ಹದೆಗೆಟ್ಟಿದ್ದು, ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ ಆರೋಪಿಸಿದರು.
ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಬಿಜೆಪಿ ಕಾರ್ಯಾಲಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವವಸ್ಥೆ ಇಲ್ಲವೇ ಇಲ್ಲ, ಬೇಕಾಬಿಟ್ಟಿ ಆಡಳಿತ ನಡೆಸಲಾಗುತ್ತಿದೆ. ಆಡಳಿತ ಯಂತ್ರ ಸಂಪೂರ್ಣ ಕುಸಿದು ಹೋಗಿದೆ. ಈ ಹಿಂದೆ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ ಒನ್ ಇದೆ ಎಂದು  ಎನ್ ಜಿ ಒ ಒಂದು ವರದಿ ನೀಡಿದಾಗ ಮುಖ್ಯಮಂತ್ರಿಗಳು ಇದನ್ನ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.ಆದರೀಗ ಅದು ಸತ್ಯವಾಗುತ್ತಿದೆ ಡಿಐಜಿ ರೂಪಾ ಅವರು ಜೈಲ್ ಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವರದಿ ನೀಡಿದಾಗ ಮುಖ್ಯಮಂತ್ರಿಗಳಿಗೆ ಸವಾಲು ಹಾಕುವ ರೀತಿಯಲ್ಲಿ ಮಾತನಾಡುವುದನ್ನು ನೋಡಿದರೆ ಅಧಿಕಾರಿಗಳ ಮೇಲೆ ಸರ್ಕಾರ ಸರಕಾರದ ಮೇಲೆ ಅಧಿಕಾರಿಗಳ ಹಿಡಿತ ಇಲ್ಲ ಎಂದು ಗೊತ್ತಾಗುತ್ತದೆ ಎಂದರು.
ಈ ಹಿಂದಿನ ಹಲವಾರು ಪ್ರಕರಣಗಳನ್ನು ಅವಲೋಕನ ಮಾಡಿದಾಗ ಸರ್ಕಾರ ವ್ಯವಸ್ಥಿತವಾಗಿ ತಮ್ಮ ಅವಧಿಯಲ್ಲಿನ ಭ್ರಷ್ಟಾಚಾರ ಹಾಗೂ ಅವ್ಯವಹಾರವನ್ನು ಮುಚ್ಚಿಹಾಕಿಕೊಳ್ಳುತ್ತಿದೆ. ಸಚಿವ ಕೆ.ಜೆ, ಜಾರ್ಜ, ಎಚ.ವೈ.ಮೇಟಿ ಪ್ರಕರಣಗಳು ಇದಕ್ಕೆ ಸಾಕ್ಷಯಾಗಿವೆ. ಬೇಕಾದ ಹಾಗೇ ಸಿಐಡಿ ಬಳಸಿಕೊಳ್ಳುತ್ತಿದ್ದು, ಎಸಿಬಿ ಜಾರಿಗೆ ತಂದುದು ತಮಗೆ ಬೇಕಾದವರ ಪೋಷಣೆಗಾಗಿಯೇ ಎಂದ ಶೆಟ್ಟರ್, ಈ ಹಿಂದೆ ಡಿವೈಎಸ್ ಪಿ ಅನುಪಮಾ ಶೆಣೈ ಮುಖ್ಯಮಂತ್ರಿಗಳನ್ನೇ ನೇರವಾಗಿ ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಎಸಿಬಿಗೆ ದೂರು ನೀಡಿದ್ದರು ಎಂದರು.
ಇದೇ ವೇಳೆ ಸಂಸದ ಪ್ರಲ್ಹಾದ ಜೋಶಿ ಅವರು ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಫಲಾನುಭವಿಗಳಿಗೆ ಸಿಲಿಂಡರ್ ವಿತರಿಸಿ ಮಾತನಾಡಿ, ರಾಜ್ಯ ಸರ್ಕಾರ ರೈತರಿಗೆ ಸರಿಯಾಗಿ ಕೇಂದ್ರ ಸರ್ಕಾರದ ಯೋಜನೆಗಳನ್ಮು ತಲಪುಸುತ್ತಿಲ್ಲ. ಕೇಂದ್ರದಿಂದ ಬಿಡುಗಡೆಗೊಂಡ ಬೆಳೆ ವಿಮೆ ರೈತರಿಗೆ ತಲುಪದಿರುವುದಕ್ಕೆ ಇದೇ ಕಾರಣ ಎಂದು ಹೇಳಿದರು.
ಅನೇಕ ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ದೇಶವನ್ನು ಲೂಟಿ ಮಾಡಿದೆ. ಸ್ವಾರ್ಥಕ್ಕಾಗಿ ಆಡಳಿತ ನಡೆಸಿದೆ ಅಲ್ಲದೇ, ಸಾವಿರಾರು ಕೋಟಿ ರೂ.ಗಳ ಹಗರಣ ಮಾಡಿ ದೇಶದ ಮಾನ ಹರಾಜು ಹಾಕಿದೆ ಎಂದು ಜೋಶಿ ಆರೋಪಿಸಿದರು.
ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ,ಬಿಜೆಪಿ ಅಧಿಕಾರದ ಸಂದರ್ಭದಲ್ಲಿ ನವಲಗುಂದ ಕ್ಷೇತ್ರಕ್ಕೆ ವ್ಯಾಪಕ ಅನುದಾನ ಬಂದಿತ್ತಲ್ಲದೇ ಜುಡಿಯುವ ನೀರು, ಮೂಲಭೂತ ಸೌಕರ್ಯ ಸೇರಿದಂತೆ ಅನೇಕ ಅಭಿವೃದ್ದಿ ಕಾರ್ಯಗಳು ಆಗಿದ್ದವು.ಆದರೆ ಈಗ ಭೀಕರ ಬರಗಾಲವಿದ್ದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ರಾಜ್ಯ ಸರ್ಕಾರ,ಸ್ಥಳೀಯ ಆಡಳಿತ ಕಣ್ಣು ತೆರೆಯದಿರುವುದು ದುರದೃಷ್ಟಕರ.ಸ್ಥಳೀಯ ಶಾಸಕರು ಕೇವಲ ಪ್ರಚಾರದ ತಂತ್ರಕ್ಕೆ ಮೊರೆ ಹೋಗಿದ್ದು,ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗೊಡನೆಗೆ ಹೋಗುತ್ತಿಲ್ಲ ಎಂದರು.

ಈ ಸಂದರ್ಭದಲ್ಲಿ ಎ.ಎಚ್.ನದಾಫ್, ಮುತ್ತು ದುಂದೂರ, ಮಂಜು ಹಡಪದ ಗೆಳೆಯರ ಬಳಗದ ನೂರಾರು ಕಾರ್ಯಕರ್ತರು ಕಾಂಗ್ರೆಸ್,ಜೆಡಿಎಸ್ ತ್ಯಜಿಸಿ ಬಿಜೆಪಿಗೆ ಸೇರ್ಪಡೆಯಾದರು.

ಕಾರ್ಯಕ್ರಮದಲ್ಲಿ ಜಿ.ಪಂ.ಅಧ್ಯಕ್ಷೆ ಚೈತ್ರಾ ಶಿರೂರ, ಬಸವರಾಜ ಕುಂದಗೋಳಮಠ, ಜಯತೀರ್ಥ ಕಟ್ಟಿ, ಸಿದ್ದನಗೌಡ ಪಾಟೀಲ, ರಾಜು ಕಂಪ್ಲಿ, ಫಕ್ಕೀರವ್ವ ಹುಲ್ಲಂಬಿ, ಎಂ.ಎಂ.ಗುಡಿ, ಮಹಾದೇವಿ ಗಿಡ್ಡನವರ, ಜೀವನ್ಮುಕ್ತ ಬೈಲಮ್ಮನವರ, ಮುತ್ತು ಚಾಕಲಬ್ಬಿ, ಸೋಮು ಪಟ್ಟಣಶೆಟ್ಟಿ, ರೋಹಿತ ಮತ್ತಿಹಳ್ಳಿ, ಮುತ್ತನಗೌಡ್ರು ಪಾಟೀಲ, ಮಲ್ಲಪ್ಪಾ ಪೂಜಾರ, ಆನಂದಪ್ಪ, ಶಕುಂತಲಾ ಚರಂತಿಮಠ, ಶಶಿಕಾಂತ ಬೆಂಗೇರಿ, ಶ್ವೇತಾ ಪಾಟೀಲ, ಮುದಕಣ್ಣ ಕಂಕೊಳ್ಳಿ ಮುಂತಾದವರಿದ್ದರು. ಪರಮೇಶ್ವರ ಯಡ್ರಾವಿ ಸ್ವಾಗತಿಸಿದರು. ಸಂತೋಷ ಜೀವನಗೌಡ್ರ ನಿರೂಪಿಸಿದರು.

Leave a Comment