ಸರಸ್ವತಿಯ ಜ್ಞಾನ ಭಂಡಾರ ಬೆಲೆಕಟ್ಟಲಾಗದ್ದು : ಡಾ.ಭಾಷ್ಯಂ ಸ್ವಾಮೀಜಿ

ಮೈಸೂರು. ಜೂ.18: ಸರಸ್ವತಿಯ ಜ್ಞಾನ ಭಂಡಾರ ಬೆಲೆಕಟ್ಟಲಾಗದ್ದು ಎಂದು ನಾರಸಿಂಹ ಕ್ಷೇತ್ರದ ಪೀಠಾಧಿಪತಿ ಡಾ.ಭಾಷ್ಯಂ ಸ್ವಾಮೀಜಿ ತಿಳಿಸಿದರು.
ಅವರಿಂದು ಯೋಗಾನರಸಿಂಹಸ್ವಾಮಿ ದೇವಸ್ಥಾನದ ಕಲ್ಯಾಣೋತ್ಸವ ಭವನದಲ್ಲಿ ವೆಂಕಟಗಿರಿ ಪ್ರಕಾಶನ ವತಿಯಿಂದ ಆಯೋಜಿಸಲಾದ ‘ಬಹುಭಾಷಾ ಮುಂಗಾರು ಕವಿ ಸಮ್ಮೇಳನ’ವನ್ನು ಉದ್ಘಾಟಿಸಿ ಮಾತನಾಡಿದರು. ಸಾಹಿತ್ಯ ಚರಿತ್ರೆಯ ಪುಟಗಳನ್ನು ತೆರೆದಾಗ ಕೃಷ್ಣದೇವರಾಯನ ಆಸ್ಥಾನದಲ್ಲಿ ಎಲ್ಲ ಕವಿಗಳಿಗೂ ಆಶ್ರಯ ನೀಡಲಾಗಿತ್ತು. ವಿಜಯನಗರ ಸಾಮ್ರಾಜ್ಯದ ಆಡಳಿತದ ದ್ಯೋತಕವಾದ ಈ ದಿವ್ಯ ಸಾನಿಧ್ಯದಲ್ಲಿ ಬಹುಭಾಷಾ ಕವಿ ಸಮ್ಮೇಳನ ನಡೆಯುತ್ತಿದೆ ಎಂದರೆ ಅದಕ್ಕಿಂತ ಮಿಗಿಲಾದ ಸಂಗತಿ ಬೇರೊಂದಿಲ್ಲ ಎಂದರು.
ಇಲ್ಲಿರುವ ಎಲ್ಲರೂ ಬೇಕಾದಷ್ಟು ವೇದಿಕೆ ಹಂಚಿಕೊಂಡಿದ್ದಾರೆ. ಕೃತಿ ರಚಿಸಿದ್ದಾರೆ. ಸರಸ್ವತಿಯ ಜ್ಞಾನ ಭಂಡಾರ ಬೆಲೆಕಟ್ಟಲಾಗದ್ದು. ಕವಿ ಸಮ್ಮೇಳನ ಮುಖ್ಯವಾದದ್ದು. ನಮಗೆ ನಮ್ಮ ನಮ್ಮ ಭಾಷೆ ದೊಡ್ಡದು. ಕರ್ನಾಟಕದಲ್ಲಿ ಅತಿ ಮುಖ್ಯವಾಗಿರುವ ಭಾಷೆ ಕನ್ನಡ. ಕನ್ನಡವಿರಲಿ, ತಮಿಳು, ಉರ್ದು ಯಾವುದೇ ಭಾಷೆಯಿರಲಿ ಅಲ್ಲಾ ಎಂಬುದು ಸಂಸ್ಕೃತ ಭಾಷೆಯಿಂದ ಬಂದಿರುವಂಥದ್ದು ಎಂದು ತಿಳಿಸಿದರು.
ಕವಿಗಳು ಮನಸ್ಸಿಗೆ ಸಂತೋಷ ನೀಡುತ್ತಾರೆ. ಆತ್ಮನಿವೇದನೆಗೆ ಇರತಕ್ಕ ಕವಿಗಳಿಗೆ ಜಾಗವಲ್ಲದೇ, ಪರಮಾತ್ಮನ ಸಾನಿಧ್ಯದ ಜೊತೆ ಆತ್ಮತೃಪ್ತಿಗಾಗಿರತಕ್ಕ ಹವಿಸ್ಸನ್ನು ನಿವೇದನೆ ಮಾಡಿದ ಫಲದೊರಕಿರುವುದು ಸಂತೋಷ ಎಂದರು.
ಕವಿ ಸಮ್ಮೇಳನದಲ್ಲಿ ಪ್ರೊ.ಸಿ.ಪಿ.ಕೃಷ್ಣಕುಮಾರ್, ಪ್ರೊ.ಮಳಲಿವಸಂತ್ ಕುಮಾರ್, ಡಾ.ಕವಿತಾ ರೈ, ಪ್ರೊ.ಬಿ.ಎನ್.ನಾಗರಾಜ್ ಭಟ್, ಪ್ರೊ.ವಿ.ಡಿ.ಹೆಗ್ಗಡೆ(ಹಿಂದಿ), ರಾಚಪ್ಪ ಟಿವಿ.ಎಸ್,ರಂಗಸ್ವಾಮಿ ತಗಡೂರು, ನಾಗರತ್ನ ಹೆಮ್ಮಿಗೆ(ತೆಲುಗು), ಡಾ.ಲತಾ ರಾಜಶೇಖರ್, ಡಾ.ಮಣಿ(ತಮಿಳು), ಪ್ರೊ.ಕೆ.ಭೈರವಮೂರ್ತಿ, ಡಾ.ಟಿ.ವಿ.ಸತ್ಯನಾರಾಯಣ್(ಸಂಸ್ಕೃತ), ರಂಗನಾತ ಮೈಸೂರು, ಚಂಪಾಶಿವಣ್ಣ, ಕೆರೋಡಿ ಲೋಲಾಕ್ಷಿ, ವಿ.ನಾರಾಯಣ್ ರಾವ್ ಅವರಿಗೆ ಗೌರವ ಸಮರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ನಾಡಿನ ಹಿರಿಯ ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲಶಾಸ್ತ್ರೀ, ಲೇಖಕ ಪ್ರೊ.ನೀ.ಗಿರಿಗೌಡ, ಹಿರಿಯ ಕಲಾವಿದ ಹ.ರಾ.ಭದ್ರೇಶ್ ಕುಮಾರ್ ಉಪಸ್ಥಿತರಿದ್ದರು.

Leave a Comment