ಸರಣಿ ಸಭೆ ಆದರೂ, ಬಗೆಹರಿಯದ ಕಸದ ಸಮಸ್ಯೆ

ಬೆಂಗಳೂರು, ನ. ೮- ನಗರದಲ್ಲಿ ಕಸದ ಸಮಸ್ಯೆಗೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಮೇಯರ್ ಗಂಗಾಂಬಿಕೆ ಅಧ್ಯಕ್ಷತೆಯಲ್ಲಿ ಸಾಲುಸಾಲು ಸಭೆಗಳು ನಡೆದಿದ್ದರೂ ಕಸದ ಸಮಸ್ಯೆಗೆ ಮಾತ್ರ ಮುಕ್ತಿ ದೊರೆತಿಲ್ಲ.

ನಗರದಲ್ಲಿ ಪ್ರತಿನಿತ್ಯ 5,700 ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಸಮರ್ಪಕ ರೀತಿಯಲ್ಲಿ ಕಸ ರವಾನಿಸಬೇಕು ಎಂಬ ಉಪಮುಖ್ಯಮಂತ್ರಿಗಳ ಆದೇಶ ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳುತ್ತಿಲ್ಲ.

ಕಂಡಕಂಡಲ್ಲಿ ಕಸ ಎಸೆದರೆ 500 ರೂ. ದಂಡ ವಿಧಿಸಿ ಎಂಬ ಸರ್ಕಾರದ ಸೂಚನೆ ಸಾಮಾಜಿಕರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ನಗರದಲ್ಲಿ ಕಂಡಕಂಡಲ್ಲಿ ಕಸ ಸುರಿಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ದೀಪಾವಳಿ ಹಬ್ಬದ ವೇಳೆ ಕಸದ ರಾಶಿ ದುಪ್ಪಟ್ಟುಗೊಂಡಿದೆ. ನಗರದ ಪ್ರಮುಖ ವೃತ್ತಗಳ ಮೂಲೆಗಳಲ್ಲಿ ಕಸದ ರಾಶಿ ಆವೃತ್ತಗೊಂಡಿದ್ದು, ‘ದಾರಿ ಯಾವುದಯ್ಯಾ’ ಎಂಬ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಹಬ್ಬದ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರು ತ್ಯಾಜ್ಯ ಸಂಗ್ರಹ ಮಾಡದೆ ಇರುವುದರಿಂದ ನಗರದ ಕೆ.ಆರ್. ಮಾರುಕಟ್ಟೆ ಸೇರಿದಂತೆ, ಪ್ರಮುಖ ಮಾರುಕಟ್ಟೆಗಳಲ್ಲಿ ಕಸದ ರಾಶಿ ದುಪ್ಪಟ್ಟಾಗಿದೆ.

ಮಡಿವಾಳ, ಅವಿನ್ಯೂ ರಸ್ತೆ, ಬಸವೇಶ್ವರ ನಗರ, ಮೂಡಲಪಾಳ್ಯ, ವಿಜಯನಗರ, ಮತ್ತಿತರ ಕಡೆ ಕಸದ ರಾಶಿ ಎದ್ದುಕಾಣುತ್ತಿದ್ದು, ಟನ್ ಗಟ್ಟಲೆ ಕಸ ರಸ್ತೆ ನಡುವೆಯೇ ಬಿದ್ದಿದೆ.

ದೀಪಾವಳಿ ಹಬ್ಬದ ವೇಳೆ ಕಸದ ರಾಶಿ ಕಾಣಬಾರದು ಎಂಬ ಉಪಮುಖ್ಯಮಂತ್ರಿಗಳ ಹೇಳಿಕೆಗೆ ಕವಡೆಕಾಸಿನ ಬೆಲೆ ಸಿಕ್ಕಿಲ್ಲ.

Leave a Comment