ಸರಣಿ ಅಪಘಾತ: ಲಾರಿ ಚಾಲಕ ಮೃತ್ಯು

ಭಟ್ಕಳ, ಸೆ.೧೩- ಮೀನಿನ ಲಾರಿ ಹಾಗೂ ಖಾಸಗಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದು ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಿನ್ನೆ ತಡರಾತ್ರಿ ಭಟ್ಕಳ ತಾಲೂಕಿನ ಸೋಡಿಗದ್ದೆ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ನಡೆದಿದೆ. ಮೃತರನ್ನು ಕಾಸರಗೋಡು-ಮಂಜೇಶ್ವರ ನಿವಾಸಿ ಅಬ್ದುಲ್ಲಾ ಎಂದು ಹೆಸರಿಸಲಾಗಿದೆ. ಅಪಘಾತದ ಬಳಿಕ ರಸ್ತೆಯಲ್ಲಿ ಅಡ್ಡ ನಿಂತಿದ್ದ ವಾಹನಗಳಿಗೆ ಮತ್ತೆರಡು ಬಸ್‌ಗಳು, ಬೈಕ್ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿ ೨೫ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ.
ಗೋವಾದಿಂದ ಮೀನು ಹೇರಿಕೊಂಡು ಕೇರಳದತ್ತ ಹೋಗುತ್ತಿದ್ದ ಲಾರಿಗೆ ಮಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಗಣೇಶ್ ಟ್ರಾವೆಲ್ಸ್ ಬಸ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಇದೇ ವೇಳೆ ಮಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಬಂದ ಸುಗಮ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಮತ್ತೊಂದು ಬಸ್, ಅಪಘಾತಕ್ಕೀಡಾದ ಗಣೇಶ್ ಟ್ರಾವೆಲ್ಸ್ ಬಸ್‌ಗೆ ಡಿಕ್ಕಿ ಹೊಡೆದಿದೆ. ಹಿಂದಿನಿಂದ ಸಾಗಿಬಂದ ಗಣೇಶ್ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಇನ್ನೊಂದು ಬಸ್ ಕೂಡಾ ನಿಯಂತ್ರಣ ಕಳೆದುಕೊಂಡು ಸುಗಮ ಬಸ್‌ಗೆ ಡಿಕ್ಕಿ ಹೊಡೆದಿದೆ. ಇದೇ ದಾರಿಯಾಗಿ ಬಂದ ಎರಡು ಬೈಕ್‌ಗಳು ಕೂಡ ಬಸ್‌ಗಳಿಗೆ ಡಿಕ್ಕಿ ಹೊಡೆದಿವೆ. ಮೀನಿನ ಲಾರಿ ಚಾಲಕ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರೆ ಬಸ್ ಚಾಲಕ ಗಂಭೀರ ಗಾಯಗೊಂಡಿದ್ದಾನೆ.
೩ ಬಸ್ಸುಗಳಲ್ಲಿ ಇದ್ದ ೨೫ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆ, ಉಡುಪಿ ಜಿಲ್ಲೆಯ ಮಣಿಪಾಲ್ ಹಾಗೂ ಕುಂದಾಪುರದ ಖಾಸಗಿ ಆಸ್ಪತ್ರೆಗೆ ರವಾನೆ. ಸಣ್ಣಪುಟ್ಟ ಗಾಯಾಳುಗಳಿಗೆ ಭಟ್ಕಳದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment