ಸರಗಳ್ಳರ ಪತ್ತೆಗೆ ವಿಶೇಷ ಪೊಲೀಸ್ ತಂಡ

ಬೆಂಗಳೂರು, ಸೆ. ೨- ರಾಮಮೂರ್ತಿ ನಗರ, ಸದಾಶಿವನಗರ, ಸಂಜಯ್ ನಗರ, ಆರ್.ಟಿ. ನಗರ, ಬಾಣಸವಾಡಿ ಸೇರಿದಂತೆ, ನಿನ್ನೆ ಹಾಡುಹಗಲೇ ನಾಲ್ಕು ಕಡೆಗಳಲ್ಲಿ ಮಹಿಳೆಯರ ಮಾಂಗಲ್ಯಸರ ದೋಚಿ ಪರಾರಿಯಾಗಿರುವ ಸರಗಳ್ಳರ ಪತ್ತೆಗಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
ನಾಲ್ಕು ಕಡೆಗಳಲ್ಲಿ ಸರಗಳವು, ಇನ್ನೆರಡು ಕಡೆಗಳಲ್ಲಿ ಸರಕಳ್ಳತನಕ್ಕೆ ವಿಫಲಯತ್ನ ನಡೆಸಿರುವ ಸರಗಳ್ಳರಿಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಿ ಶೋಧ ನಡೆಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ತಿಳಿಸಿದ್ದಾರೆ.
ಆರ್.ಟಿ. ನಗರ ಹಾಗೂ ಸಂಜಯ್ ನಗರದಲ್ಲಿ ದುಷ್ಕರ್ಮಿಗಳು ಸ್ಕೂಟರ್ ಬಳಸಿದ್ದರೆ, ಉಳಿದ ಕಡೆಗಳಲ್ಲಿ ಕಪ್ಪುಬಣ್ಣದ ಪಲ್ಸರ್ ಬೈಕ್‌ನಲ್ಲಿ ಬಂದ ಸರಗಳ್ಳರು ಕೃತ್ಯ ನಡೆಸಿದ್ದಾರೆ. ಇದನ್ನು ಅವಲೋಕಿಸಿದರೆ, ಒಂದೇ ಗ್ಯಾಂಗ್‌ನ ಸದಸ್ಯರು ಎರಡೂ ಕಡೆ ನಡೆಸಿರುವ ಸಾಧ್ಯತೆ ಇದೆ. ಸರಗಳವು ನಡೆದ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ ದುಷ್ಕರ್ಮಿಗಳಿಗಾಗಿ ಹುಡುಕಾಟ ನಡೆಸಲಾಗಿದೆ.
ದುಷ್ಕರ್ಮಿಗಳಿಗಾಗಿ ನಿನ್ನೆ ಮಧ್ಯಾಹ್ನದಿಂದಲೇ ಕಾರ್ಯಾಚರಣೆ ನಡೆಸಲಾಗಿದೆ. ಇಲ್ಲಿಯವರೆಗೆ ಸರಗಳ್ಳರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸರ ಕಳೆದುಕೊಂಡ ಮಹಿಳೆಯರು ನೀಡಿರುವ ಮಾಹಿತಿ ಆಧರಿಸಿ ಹಳೆಯ ಆರೋಪಿಗಳ ಚಹರೆಯನ್ನು ಕಲೆಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.
ಹಾಡುಹಗಲೇ ನಡೆದಿರುವ ಸರಗಳವು ಕೃತ್ಯಗಳನ್ನು ಸವಾಲಾಗಿ ಪರಿಗಣಿಸಲಾಗಿದ್ದು, ಆದಷ್ಟು ಶೀಘ್ರ ದುಷ್ಕರ್ಮಿಗಳನ್ನು ಪತ್ತೆಹಚ್ಚುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

Leave a Comment