ಸರಕು ಇಳಿಸಿ ವಾಪಸ್ಸು ಬಂದ ಬಾಹ್ಯಾಕಾಶ ನೌಕೆ

ತುಂಬಿ ಕಳುಹಿಸಿದ್ದ ಸಾಮಾನು – ಸರಂಜಾಮುಗಳನ್ನು ನಿಗದಿತ ಸ್ಥಳಕ್ಕೆ ಮುಟ್ಟಿಸಿ ವಾಪಸ್ಸು ಬರುವ ಟ್ರಕ್‌ನಂತೆಯೇ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸಾಮಾನು ಹೊತ್ತು ಹೊರಟಿದ್ದ ಸ್ಪೇಸ್ ಎಕ್ಸ್‌ನ ಡ್ರಾಗನ್ ಹೆಸರಿನ ಬಾಹ್ಯಾಕಾಶ ನೌಕೆ, ಅಲ್ಲಿ ತಾನು ಹೊತ್ತು ಹೋಗಿದ್ದ ಸಾಮಾನು ಇಳಿಸಿ, ಭೂಮಿಗೆ ಸುರಕ್ಷಿತವಾಗಿ ಮರಳಿದೆ.

ಡ್ರಾಗನ್ ಹೆರಿನ ಈ ಬಾಹ್ಯಾಕಾಶ ನೌಕೆ ವಾಣಿಜ್ಯ ಸರಕು ಸಾಗಣೆ ಮಾಡುವ ಟ್ರಕ್‌ನಂತೆ ಕಾರ್ಯ ನಿರ್ವಹಿಸುತ್ತದೆ.

ಟನ್ ಗಟ್ಟಲೆ ಸಾಮಾನು – ಸರಂಜಾಮು ಹೊತ್ತು ಸಾಗುವ ಈ ನೌಕೆ, ಅದನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಮುಟ್ಟಿಸಿ ವಾಪಸ್ಸು ಬರುತ್ತೆ. ಬರುವಾಗ ಖಾಲಿ ಬರುವುದಿಲ್ಲ. ಅಲ್ಲಿಗೆ ಬೇಡವಾದ, ಸಂಶೋಧನೆಗೆ ಒಳಪಡುವ ವಸ್ತುಗಳನ್ನು ಅಲ್ಲಿಂದು ತುಂಬಿಸಿಕೊಂಡು ಭೂಮಿಗೆ ಬರುತ್ತದೆ.

ಫೆ. 19 ರಂದು ಹೊರಟಿದ್ದ ಈ ನೌಕೆ ಮಾರ್ಚ್ 19 ರಂದು ಭೂಮಿಗೆ ಸುರಕ್ಷಿತವಾಗಿ ಮರಳಿದೆ.

ಮರುಬಳಕೆ ಮಾಡಬಹುದಾದ ಈ ನೌಕೆ ಎಷ್ಟು ಸಾರಿ ಬೇಕಾದರೂ ಬಾಹ್ಯಾಕಾಶ ಕೇಂದ್ರಕ್ಕೆ ಹೋಗಿಬರಬಲ್ಲದು.

ಎರಡು ಟನ್‌ನಷ್ಟು ಆಹಾರ, ನೀರು, ವೈಜ್ಞಾನಿಕ ಉಪಕರಣಗಳನ್ನು ಹೊತ್ತ ನೌಕೆ ಫೆಬ್ರವರಿ 19 ರಂದು ಕೇಪ್ ಕಾನವೆರಲ್‌ನ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಬಾಹ್ಯಾಕಾಶ ನಿಲ್ದಾಣದತ್ತ ಹೊರಟಿತ್ತು.

ಫಾಲ್ಕನ್ 9 ಹೆಸರಿನ ರಾಕೆಟ್ ಬೆನ್ನೇರಿ ಫೆ. 19, ಬೆಳಿಗ್ಗೆ 9.30ಕ್ಕೆ ಹೊರಟಿದ್ದ ಈ ನೌಕೆ ಮಾರ್ಚ್ 19 ರಂದು ಬೆಳಿಗ್ಗೆ 9.38ಕ್ಕೆ ಪೆಸಿಫಿಕ್ ಸಾಗರದ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಸುರಕ್ಷಿತವಾಗಿ ಇಳಿದಿದೆ.

ಮರುಬಳಕೆಗೆ ನೌಕೆ

ಅಮೆರಿಕಾದ ಖಾಸಗಿ ಬಾಹ್ಯಾಕಾಶ ಸಂಸ್ಥೆಯಾದ ಸ್ಪೇಸ್ ಎಕ್ಸ್‌ಗೆ ಸೇರಿದ ಡ್ರಾಗನ್ ಹೆಸರಿನ ಈ ಬಾಹ್ಯಾಕಾಶ ನೌಕೆ ಮರುಬಳಕೆ ಮಾಡುವಂತಾಗಿದ್ದು, ಬೇಕು ಎಂದಾಗ ಮತ್ತೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಬಹುದು ಎಂಬುದು ಈ ಯಾನದ ಮುಖ್ಯ ಗುರಿ.

ಬಾಹ್ಯಾಕಾಶ ನಿಲ್ದಾಣ ಗಗನ ಯಾನಿಗಳನ್ನು ವೈಜ್ಞಾನಿಕ ಉಪಕರಣಗಳನ್ನು ರವಾನಿಸುವುದರ ಜೊತೆಗೆ ಅಲ್ಲಿ ಉಪಯೋಗಕ್ಕೆ ಬಾರದ ಉಪಕರಣಗಳನ್ನು ಸಂಶೋಧನಾ ಮಾದರಿಗಳನ್ನು ಅಲ್ಲಿಂದ ಭೂಮಿಗೆ ತರುವುದು ಯೋಜನೆಯ ಗುರಿಯಂತೆ. ಅಲ್ಲಿಂದ ವಾಪಸ್ಸು ಬರುವಾಗ ಸುಮಾರು ಎರಡು ಟನ್‌ನಷ್ಟು ಹಳೆ ಉಪಕರಣಗಳು, ಬಿಸಾಡುವ ವಸ್ತುಗಳು, ಸಂಶೋಧನಾ ಮಾದರಿಗಳನ್ನು ಹೊತ್ತುತಂದಿದೆ.

ಸುಮಾರು ಒಂದು ತಿಂಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಜೋಡಣೆಯಾಗಿದ್ದ ಈ ನೌಕೆಯಲ್ಲಿಯ ಎಲ್ಲಾ ಸಾಮಾನು – ಸರಂಜಾಮುಗಳನ್ನು ಖಾಲಿ ಮಾಡಿದ ಅಲ್ಲಿ ಕಾರ್ಯ ನಿರ್ವಹಿಸುವ ಗಗನ ಯಾನಿಗಳು ಬೇಡದ ವಸ್ತುಗಳನ್ನು, ಸಂಶೋಧನಾ ಸಾಮಗ್ರಿಗಳನ್ನು ನೌಕೆಗೆ ತುಂಬಿ ಕಳುಹಿಸಿದ್ದಾರೆ.

ಬಾಹ್ಯಾಕಾಶ ನಿಲ್ದಾಣವನ್ನು ಬಿಟ್ಟು ನೌಕೆ 6 ಗಂಟೆಗಳ ಪ್ರಯಾಣದ ನಂತರ ಭೂಮಿ ತಲುಪಿದೆ. ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ನೌಕೆಯನ್ನು ಭಾರಿ ಗಾತ್ರದ ಪ್ಯಾರಾಚೂಟ್‌ಗಳ ಮೂಲಕ ಸುರಕ್ಷಿತವಾಗಿ ಇಳಿಸಲಾಗಿದೆ ಎಂದು ನಾಸಾ ಮೂಲಗಳು ತಿಳಿಸಿವೆ.

-ಉತ್ತನೂರು ವೆಂಕಟೇಶ್

Leave a Comment