ಸಯನೈಡ್ ಮೋಹನ್ ಗಲ್ಲು-ಜೀವಾವಧಿಗೆ ಇಳಿಕೆ

ಬೆಂಗಳೂರು, ಅ.೧೨: ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡು ಸಯನೈಡ್ ನೀಡಿ ಹತ್ಯೆ ಮಾಡಿದ ಆರೋಪಿ, ಸಯನೈಡ್ ಮೋಹನ್ ಕುಮಾರ್‌ಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ ಇಂದು ಜೀವಾವಧಿಗೆ ಪರಿವರ್ತಿಸಿದೆ.
ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಾಧೀಶರಾದ ರವಿ ಮಳೀಮಠ್ ಮತ್ತು ಮೈಕನ್ ಕುನ್ಹಾ ಅವರು ಈ ತೀರ್ಪು ನೀಡಿದ್ದಾರೆ. ವಿಚಾರಣೆ ವೇಳೆ ಈ ಇಬ್ಬರು ನ್ಯಾಯಾಧೀಶರು ಸಯನೈಡ್ ಮೋಹನ್ ಬದುಕಲು ಅರ್ಹತೆ ಇಲ್ಲದ ವ್ಯಕ್ತಿ. ಮಹಿಳೆಯರ ಪಾಲಿಗೆ ಕಂಟಕವಾಗಿದ್ದಾನೆ. ಆತ ಯಾವುದೇ ಕ್ಷಮಾಧಾನಕ್ಕೂ ಅರ್ಹನಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಘಟನೆಯ ಹಿನ್ನೆಲೆ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮಹಿಳೆಯೊಂದಿಗೆ ಅತ್ಯಾಚಾರ ಎಸಗಿ ನಂತರ ಆಕೆಗೆ ಸಯನೈಡ್ ತಿನ್ನಿಸಿ ಕೊಲೆ ಮಾಡಿದ ಆರೋಪದಡಿ ದಕ್ಷಿಣ ಕನ್ನಡ ಜಿಲ್ಲಾ ೪ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೆ.ಮೋಹನ್ ಕುಮಾರ್ ಅಲಿಯಾಸ್ ಸಯನೈಡ್ ಮೋಹನ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ.
ಸಯನೈಡ್ ಮೋಹನ್ ೨೦೦೪ರಿಂದ ೨೦೦೯ರ ಅವಧಿಯಲ್ಲಿ ‘೨೦ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ಸಯನೈಡ್ ತಿನ್ನಿಸಿ ಕೊಲೆಗೈದಿದ್ದಾನೆ’ ಎಂಬ ಆರೋಪವಿದೆ. ಬಂಟ್ವಾಳ ಮೂಲದ ಶಿಕ್ಷಕನಾದ ಈತ ೨೦೦೨ರಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದ.
೨೦೦೯ರ ಜೂನ್ ೧೮ರಂದು ಅನಿತಾ ಎಂಬ ಮಹಿಳೆಯ ಶವ ಹಾಸನದ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದ ಮಹಿಳೆಯರ ಶೌಚಾಲಯದಲ್ಲಿ ಪತ್ತೆಯಾಗಿತ್ತು. ಈಕೆ ಹಾಗೂ ಮೋಹನ್ ನಡುವಿನ ಫೋನ್ ಕಾಲ್ ಸಂಭಾಷಣೆ ಆಧಾರದಲ್ಲಿ ಪೊಲೀಸರು ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಿದ್ದರು.
ಹಿಂದಿನ ಮೂರು ಪ್ರಕರಣಗಳಲ್ಲಿನ ಮರಣ ದಂಡನೆ ಶಿಕ್ಷೆಯನ್ನು ಪ್ರಶ್ನಿಸಿ ಮೋಹನ್ ಕುಮಾರ್ ಹೈಕೋರ್ಟಿನಲ್ಲಿ ಅಪೀಲು ಸಲ್ಲಿಸಿದ್ದ. ಬಾಕಿ ಉಳಿದಿರುವ ೧೬ ಯುವತಿಯರ ಕೊಲೆ ಪ್ರಕರಣದ ವಿಚಾರಣೆ ಮಂಗಳೂರಿನ ೬ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ವಕೀಲರಿಲ್ಲದೆ ಸ್ವಯಂ ವಾದ: ಮೋಹನ್ ಕುಮಾರ್ ತನ್ನ ಕೇಸಿನ ಬಗ್ಗೆ ವಾದ ಮಂಡಿಸಲು ವಕೀಲರನ್ನು ನೇಮಿಸಿಕೊಂಡಿಲ್ಲ; ತಾನೇ ಸ್ವತಃ ಲಿಖೀತವಾಗಿ ಮತ್ತು ಮೌಖೀಕವಾಗಿ ವಾದಿಸುತ್ತಿದ್ದಾನೆ. ವಕೀಲರನ್ನು ಒದಗಿಸಲು ಸರಕಾರ ಮುಂದೆ ಬಂದಿದ್ದರೂ ಈ ಪ್ರಸ್ತಾವವನ್ನು ತಿರಸ್ಕರಿಸಿದ್ದಾನೆ.

Leave a Comment