ಸಮ್ಮಿಶ್ರ ಸರ್ಕಾರ ಪತನ ನಿಜವಾದ ಭವಿಷ್ಯ: ಜೋಷಿ

ಹುಬ್ಬಳ್ಳಿ, ಆ 24: ಕಾಂಗ್ರೆಸ್, ಜೆಡಿಎಸ್ ಮೈತ್ರಿ ನಾಯಕರ ಒಳಜಗಳದಿಂದಾಗಿ ಸರ್ಕಾರ ಪತನಗೊಂಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇಂದಿಲ್ಲಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೈತ್ರಿ ಸರ್ಕಾರ ಪತನ ಕುರಿತು ದೇವೇಗೌಡರು ಹೇಳಿದ ಮಾತನ್ನು ನಾನು ಈ ಹಿಂದೆಯೇ ಹೇಳದೆ. ನಾನು ನುಡಿದ ಭವಿಷ್ಯ ಈಗ ನಿಜವಾಗಿದೆ ಎಂದರು.

ಬಿಜೆಪಿಯವರೇ ಮೈತ್ರಿ ಸರ್ಕಾರ ಉರುಳಿಸುತ್ತಿದ್ದಾರೆ ಎಂದು ಜನರ ಮುಂದೆ ಕಾಂಗ್ರೆಸ್-ಜೆಡಿಎಸ್‍ ನಾಯಕರು ಆರೋಪಿಸುತ್ತಿದ್ದರು. ಸತ್ಯ ಒಂದಲ್ಲ ಒಂದು ದಿನ ಹೊರಬೀಳುತ್ತದೆ ಎಂಬುದಕ್ಕೆ ದೇವೇಗೌಡರ ಹೇಳಿಕೆಯೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್‌ನವರು ಅಧಿಕಾರ ವ್ಯಾಮೋಹಕ್ಕಾಗಿ ಸರ್ಕಾರ ರಚಿಸಿದ್ದರು. ಆದರೆ ತಮ್ಮ ಒಳಬೇಗುದಿಯಿಂದಾಗಿ ಮೈತ್ರಿ ಸಕಾರ ಅಧೋಗತಿಗೆ ಕಾರಣವಾಯಿತು.

ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ನೆಲದ ಕಾನೂನಿನ ಬೆಲೆ ಇಲ್ಲದಂತೆ ನಡೆದುಕೊಂಡಿದ್ದಾರೆ. ಸದ್ಯ ಸಿಬಿಐ ಅವರನ್ನು ಭ್ರಷ್ಟಾಚಾರ ಆರೋಪದಡಿ ಬಂಧಿಸಿದ್ದು, ಕಾಂಗ್ರೆಸ್ ಪಕ್ಷ ದೇಶದಲ್ಲೇ ಬೌದ್ಧಿಕ ದಿವಾಳಿಕೋರತನಕ್ಕೆ ಸಾಕ್ಷಿಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ರಾಜ್ಯ ಸಚಿವ ಸಂಪುಟದಲ್ಲಿನ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿನ ಅಸಮಾಧಾನದ ವಿಷಯಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಅಸಮಾಧಾನಗೊಂಡಿರುವವರನ್ನು ಸಮಾಧಾನಪಡಿಸುವ ಕೆಲಸ ನಡೆದಿದೆ. ರಾಜ್ಯದಲ್ಲಿ ಬಿಜೆಪಿ ಉತ್ತಮ ಆಡಳಿತ ನೀಡಲಿದೆ. ಸರ್ಕಾರ ಸುಭದ್ರವಾಗಿರಲಿದೆ ಎಂದು ಭರವಸೆ ನೀಡಿದರು.

ಶಾಸಕ ಉಮೇಶ್ ಕತ್ತಿ ಜೆಡಿಎಸ್ ಸಂಪರ್ಕದಲ್ಲಿದ್ದಾರೆ ಎಂಬ ಕೇಳಿದ ಪ್ರಶ್ನೆಗೆ ಜೋಶಿ, ಅದೆಲ್ಲ ಶುದ್ಧ ಸುಳ್ಳು ವಿಚಾರ. ಜೆಡಿಎಸ್, ಕಾಂಗ್ರೆಸ್ ಪಕ್ಷಗಳು ಮುಳುಗುತ್ತಿರುವ ಹಡಗುಗಳು. ಈ ಮುಳುಗುತ್ತಿರುವ ಹಡಗಿನಲ್ಲಿ ಯಾರೂ ಪ್ರಾಣ ಕಳೆದುಕೊಳ್ಳಲು ಸಿದ್ದರಿಲ್ಲ ಎಂದರು.

ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಕಲ್ಪಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಹೊಸ ಯೋಚನೆಯಿಂದ ಹೊಸ ಪ್ರಯೋಗಕ್ಕಾಗಿ ನಮ್ಮ ನಾಯಕರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ವಿಷಯದ ಕುರಿತು ಯಾವುದೆ ವಿಷಯ ಬಹಿರಂಗಪಡಿಸಲು ಆಗುವುದಿಲ್ಲ ಎಂದು ಗುಟ್ಟಾಗಿ ನುಡಿದರು.

ನೆರೆ ಪರಿಹಾರಕ್ಕೆ ಈಗಾಗಲೆ ಕೇಂದ್ರದಿಂದ ಹಣ ಬಿಡುಗಡೆಯಾಗಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನೆರೆ ಪರಿಹಾರ ಸ್ಥಳಗಳ ಅಧ್ಯಯನಕ್ಕೆ ಸಚಿವರುಗಳಿಗೆ ನಿಯೋಜನೆ ಮಾಡಿದ್ದು, ಅವರ ಅಧ್ಯಯನವನ್ನು ಗಮನದಲ್ಲಿಟ್ಟುಗೊಂಡು ಇನ್ನೂ ಹೆಚ್ಚಿನ ಹಣ ಬಿಡುಗಡೆ ಮಾಡಲಾಗುವುದು ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.

Leave a Comment