ಸಮ್ಮಿಶ್ರ ಸರ್ಕಾರಕ್ಕೆ ಸಂಕಟ : ಅಡ್ಡಗೋಡೆ ಮೇಲೆ ನಿಂತ ಕಾಂಗ್ರೆಸ್‌ನ 13 ಶಾಸಕರು

ಬೆಂಗಳೂರು, ಸೆ. ೧೧- ಶಾಸಕ ಜಾರಕಿಹೊಳಿ ಸಹೋದರರು ಕಾಂಗ್ರೆಸ್‌ಗೆ ಕೈಕೊಟ್ಟು ತಮ್ಮ ಆಪ್ತ ಶಾಸಕರೊಂದಿಗೆ ಬಿಜೆಪಿ ಸೇರಲಿದ್ದಾರೆ ಎಂದು ಹರಿದಾಡುತ್ತಿದ್ದ ಊಹಾಪೋಹ ಸುದ್ದಿಗಳು ಈಗ ಸ್ಪಷ್ಟರೂಪ ಪಡೆದುಕೊಂಡಿದ್ದು, ಸಮ್ಮಿಶ್ರ ಸರ್ಕಾರಕ್ಕೆ ಕಂಟಕವಾಗುವ ಸಾಧ್ಯತೆ ಹೆಚ್ಚಾಗಿದೆ.

ಬಿಜೆಪಿ ಸೇರಲಿದ್ದಾರೆ ಎನ್ನಲಾದ ಶಾಸಕರು ಮತ್ತು ಅವರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಗಳ ವಿವರ.

 • ರಮೇಶ್ ಜಾರಕಿಹೊಳಿ- ಗೋಕಾಕ್
 • ಸತೀಶ್ ಜಾರಕಿಹೊಳಿ ಯಮಕನಮರಡಿ
 • ಬಿ. ನಾಗೇಂದ್ರ- ಬಳ್ಳಾರಿ ಗ್ರಾಮಾಂತರ
 • ಆನಂದ್‌ಸಿಂಗ್- ವಿಜಯನಗರ (ಬಳ್ಳಾರಿ ಹೊಸಪೇಟೆ)
 • ಪ್ರತಾಪ್‌ಗೌಡ- ಮಸ್ಕಿ
 • ಸೀಮಂತಪಾಟೀಲ್ -ಕಾಗವಾಡ
 • ಬಿ. ನಾರಾಯಣರಾವ್- ಬಸವಕಲ್ಯಾಣ
 • ತುಕಾರಾಂ- ಸಂಡೂರು
 • ಬಸವನಗೌಡ- ರಾಯಚೂರು
 • ಡಿ.ಎಸ್. ಹುಲಗೇರಿ- ಲಿಂಗಸೂಗೂರು
 • ಮಹೇಶ್ ಕಮಟಹಳ್ಳಿ-ಅಥಣಿ
 • ನಾಗೇಶ್- ಮುಳಬಾಗಿಲು
 • ಅಮರೇಗೌಡ ಬೈರಾಪುರ- ಕುಷ್ಠಗಿ.

ಸಚಿವ ರಮೇಶ್ ಜಾರಕಿಹೊಳಿ, ಶಾಸಕ ಸತೀಶ್ ಜಾರಕಿಹೊಳಿ ಅವರು, ಕಾಂಗ್ರೆಸ್‌ನ 14 ಮಂದಿ ಅತೃಪ್ತ ಶಾಸಕರೊಂದಿಗೆ ಕಮಲ ಪಕ್ಷಕ್ಕೆ ಜಿಗಿಯಲಿದ್ದಾರೆ ಎನ್ನುವ ಸುದ್ದಿಗಳಿಗೆ ರೆಕ್ಕೆ ಪುಕ್ಕ ಬರುತ್ತಿದ್ದಂತೆ, ಡಾಲರ್ಸ್ ಕಾಲೋನಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದವು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಪ್ರತಿ ಪಕ್ಷದ ಉಪನಾಯಕ ಗೋವಿಂದ್ ಕಾರಜೋಳ ಸೇರಿದಂತೆ, ಉತ್ತರ ಕರ್ನಾಟಕ ಭಾಗದ ಅನೇಕ ಶಾಸಕರು, ಯಡಿಯೂರಪ್ಪ ಅವರೊಂದಿಗೆ ಮುಂದಿನ ನಡೆಯ ಕುರಿತು ಸುದೀರ್ಘ ಚರ್ಚೆ ನಡೆಸಿರುವುದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯ ವಿಧಾನಸಭೆಯ 224 ಸ್ಥಾನಗಳ ಪೈಕಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಯ್ಕೆಯಾಗಿದ್ದ ರಾಮನಗರ ಮತ್ತು ಸಿದ್ದುನ್ಯಾಮಗೌಡ ನಿಧನದಿಂದ ಜಮಖಂಡಿ ಕ್ಷೇತ್ರಗಳು ತೆರವಾಗಿದ್ದು, ಒಟ್ಟು 222 ಸದಸ್ಯ ಬಲದಲ್ಲಿ ಬಹುಮತಕ್ಕೆ 112 ಶಾಸಕರ ಅಗತ್ಯವಿದೆ.
ಜಾರಕಿಹೊಳಿ ಸಹೋದರರ 14 ಮಂದಿ ಶಾಸಕರು ಬಿಜೆಪಿಗೆ ಜಿಗಿದರೆ, ವಿಧಾನಸಭೆಯ ಸಂಖ್ಯಾಬಲ 208ಕ್ಕೆ ಕುಸಿಯಲಿದೆ. ಆಗ ಬಹುಮತ ಸಾಬೀತಿಗೆ 105 ಸ್ಥಾನಗಳ ಅಗತ್ಯವಿರಲಿದೆ. 104 ಶಾಸಕರನ್ನು ಹೊಂದಿರುವ ಬಿಜೆಪಿ ಪಕ್ಷೇತರರ ಸಹಾಯದಿಂದ ಅಧಿಕಾರ ಹಿಡಿಯಲು ಕಾರ್ಯತಂತ್ರ ಹೆಣೆದಿದೆ.

ಆಪರೇಷನ್ ಕಮಲಕ್ಕೆ ಪಕ್ಷದ ಅಧ್ಯಕ್ಷ ಅಮಿತ್ ಷಾ ಗ್ರೀನ್ ಸಿಗ್ನಲ್ ನೀಡಿದ್ದು, ರಹಸ್ಯವಾಗಿ ಕಾರ್ಯಾಚರಣೆ ನಡೆಸುವ ಜವಾಬ್ದಾರಿಯನ್ನು ಯಡಿಯೂರಪ್ಪ, ಶ್ರೀರಾಮುಲು ಅವರಿಗೆ ವಹಿಸಲಾಗಿದೆ ಎನ್ನುವ ಮಾತುಗಳು ಕೇಳಿಬಂದಿದ್ದು, ಯಡಿಯೂರಪ್ಪ ನಿವಾಸದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಕಾಂಗ್ರೆಸ್‌ನಲ್ಲಿ ದಿಢೀರ್ ಉಂಟಾಗಿರುವ ರಾಜಕೀಯ ಬೆಳವಣಿಗೆಯಿಂದ ಆತಂಕಕ್ಕೆ ಒಳಗಾಗಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ವಿದೇಶಿ ಪ್ರವಾಸವನ್ನು ರದ್ದುಗೊಳಿಸಿ ಇಂದು ಬೆಳಿಗ್ಗೆ ರಮೇಶ್ ಜಾರಕಿಹೊಳಿ ಶಾಸಕ ಬಿ.ಸಿ ಪಾಟೀಲ್ ಅವರೊಂದಿಗೆ ರಾಜಕೀಯ ಆಗುಹೋಗುಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.

ಸದಾಶಿವನಗರದ ನಿವಾಸದಲ್ಲಿ ಬೆಳಿಗ್ಗೆ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕ ಬಿ.ಸಿ. ಪಾಟೀಲ್ ಅವರೊಂದಿಗೆ ಪರಮೇಶ್ವರ್ ರಾಜಕೀಯ ಆಗು-ಹೋಗುಗಳ ಬಗ್ಗೆ ಚರ್ಚೆ ನಡೆಸಿ, ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗದಂತೆ, ರಮೇಶ್ ಜಾರಕಿಹೊಳಿ ಹಾಗೂ ಅವರ ಬೆಂಬಲಿಗ ಶಾಸಕರಿಗೆ ಮನ ಒಲಿಸಿದ್ದಾರೆ.

ಬೆಳಗಾವಿಯ ಪಿ.ಎಲ್.ಡಿ. ಬ್ಯಾಂಕ್ ಚುನಾವಣೆಯಲ್ಲಿ ಹಿನ್ನೆಡೆಯಾಗಿ ಮುಖಭಂಗ ಅನುಭವಿಸಿರುವುದನ್ನು ಸವಾಲಾಗಿ ಪರಿಗಣಿಸಿರುವ ಜಾರಕಿಹೊಳಿ ಸಹೋದರರು ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿಗೆ ಹಾರಲು ಮುಂದಾಗಿದ್ದಾರೆ.ಇದರ ಭಾಗವಾಗಿಯೇ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಹಾಗೂ ಶಾಸಕ ಶ್ರೀರಾಮುಲು ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅತೃಪ್ತ ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಕಾರ್ಯತಂತ್ರದಲ್ಲಿ ನಿರತರಾಗಿದ್ದಾರೆ.

ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೆ, ಅಸಮಾಧಾನ ಹೊಂದಿರುವ ಶಾಸಕರನ್ನು ಬಿಜೆಪಿಗೆ ಕರೆತಂದು ಸಚಿವ ಸ್ಥಾನ ನೀಡುವ ಆಮಿಷಗಳು ತೆರೆಮರೆಯಲ್ಲಿ ಸದ್ದಿಲ್ಲದೆ ನಡೆದಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಆ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಿ ಗೆಲ್ಲಿಸುವ ಭರವಸೆ ನೀಡಲಾಗಿದೆ. ಒಂದು ವೇಳೆ ಸಾಧ್ಯವಾಗದಿದ್ದರೆ, ನಿಗಮ ಮಂಡಳಿಗಳಲ್ಲಿ ಸ್ಥಾನ ನೀಡುವ ಭರವಸೆಯನ್ನು ನೀಡಲಾಗಿದೆ ಎನ್ನಲಾಗಿದೆ.
ಕಾಂಗ್ರೆಸ್ ಬಿಡಲ್ಲ

ಸಚಿವ ರಮೇಶ್ ಜಾರಕಿಹೊಳಿ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವ ರಮೇಶ್ ಜಾರಕಿಹೊಳಿಯಾಗಲೀ, ಬೇರೆ ಶಾಸಕರಾಗಲೀ ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂಬುದು ಬಿಜೆಪಿಯ ಊಹಾಪೋಹ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎಂದರು.
ಪಕ್ಷ ಬಿಡುವ ಬಗ್ಗೆ ಸಚಿವ ರಮೇಶ್‌ ಜಾರಕಿಹೊಳಿ ಅವರೊಂದಿಗೆ ಮಾತನಾಡಿರುವ ಅವರು ಪಕ್ಷ ಬಿಡುವುದಿಲ್ಲ ಎಂದು ತಿಳಿಸಿದರು.

ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿ ಪ್ರಯತ್ನಗಳು ಫಲ ಕೊಡುವುದಿಲ್ಲ ಎಂದು ಅವರು ಹೇಳಿದರು.

 

 

Leave a Comment