ಸಮೂಹ ನಾದಮಂಜರಿ ಗಾಯನ

ಬೆಂಗಳೂರು, ಜ 25- ಸುಮಾರು 250 ಮಂದಿ ಗಾಯಕರ ಸಮೂಹ ನಾದ ಮಂಜರಿ ಗಾಯನ ಕಾರ್ಯಕ್ರಮವು ಇದೇ ತಿಂಗಳ 28 ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ರಂಗಸಂಸ್ಥಾನ ಸಂಸ್ಥೆ ಆಯೋಜಿಸಿದೆ.
ಜಾಗತಿಕ ದಾಖಲೆಯ ಸಹಸ್ರ ಕಂಠಗಳ ಹ್ಯಾಟ್ರಿಕ್ ವೃಂದಗಾನ ನೆನಪು ಮೇಲೈಸುವ ಕಾರ್ಯಕ್ರಮ ಇದಾಗಿದ್ದು ಅಂದು ಸಂಜೆ 5.30ಕ್ಕೆ ಸಮೂಹ ಗಾಯನದ ಉದ್ಘಾಟನೆಯನ್ನು ಸಿದ್ಧಗಂಗಾಮಠದ ಶ್ರೀ ಸಿದ್ಧಲಿಂಗಮಹಾಸ್ವಾಮೀಜಿ ನೆರವೇರಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಬಂಡ್ಲಹಳ್ಳಿ ವಿಜಯಕುಮಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಹಿತಿ ಡಾ.ದೊಡ್ಡರಂಗೇಗೌಡ ಸಂಚಿಕೆ ಬಿಡುಗಡೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ, ಖ್ಯಾತ ಕವಿ ಜರಗನಹಳ್ಳಿ ಶಿವಶಂಕರ, ರಮಣಶ್ರೀ ಸಮೂಹ ಸಂಸ್ಥೆಯ ಅಧ್ಯಕ್ಷ ಷಡಕ್ಷರಿ, ಡಾ.ವುಡೇ ಪಿ.ಕೃಷ್ಣ, ಡಾ.ಜಿ.ಮಂಜುನಾಥ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ರಂಗಸಂಸ್ಥಾನ ಸಂಸ್ಥೆಯು ಕಳೆದ 19 ವರ್ಷಗಳಿಂದ ಕನ್ನಡ ಗೀತ ಗಾಯನಕ್ಕೆ ಸಂಬಂಧಿಸಿದ ಗೀತೋತ್ಸವ, ಸರಣಿಗಾಯನ, ತರಬೇತಿ ಶಿಬಿರ, ಸುಗಮ ಸಂಗೀತ ಸೇರಿದಂತೆ ಇನ್ನಿತರ ಗಾಯನ ತರಬೇತಿಯ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ ಎಂದರು.
2012 ನೇ ಸಾಲಿನಲ್ಲಿ ಒಂದೇ ವೇದಿಕೆಯಲ್ಲಿ 1000 ಗಾಯಕರು, 2014 ರಲ್ಲಿ 1101 ಗಾಯಕರು ಮತ್ತು 2017 ರಲ್ಲಿ 1112 ಗಾಯಕರು ಏಕಕಾಲಕ್ಕೆ ಸಮೂಹ ಗಾಯನ ಪ್ರಸ್ತುತಪಡಿಸಿದ್ದರು. ಸಹಸ್ರಕಂಠಗಳ ಈ ಸರಣಿ ಮೂರು ಕಾರ್ಯಕ್ರಮಗಳು ಭಾರತದ ಪ್ರತಿಷ್ಠಿತ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆಗೊಳ್ಳುವ ಮೂಲಕ ಸಮೂಹ ಗಾಯನದಲ್ಲಿ ಹ್ಯಾಟ್ರಿಕ್ ಜಾಗತಿಕ ದಾಖಲೆಯಾಗಿ ಈ ಸಂಸ್ಥೆ ತನ್ನ ಗುರುತನ್ನು ದಾಖಲಿಸಿದೆ ಎಂದು ಹೇಳಿದರು.

Leave a Comment