ಸಮುದ್ರ ಪಾಲಾದ ರೆಸಾರ್ಟ್! ಉಳ್ಳಾಲದಲ್ಲಿ ತೀವ್ರಗೊಂಡ ಕಡಲ್ಕೊರೆತ

ಮಂಗಳೂರು, ಜೂ.೧೨- ಉಳ್ಳಾಲ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಕಡಲಿನ ಅಬ್ಬರ ಹೆಚ್ಚಾಗಿದ್ದು ಉಳ್ಳಾಲ-ಉಚ್ಚಿಲ ಭಾಗದಲ್ಲಿ ಕಡಲ್ಕೊರೆತದಿಂದ ಎರಡು ಮನೆಗಳು, ಎರಡು ಶೆಡ್ ಹಾಗೂ ಒಂದು ರೆಸಾರ್ಟ್ ಸಂಪೂರ್ಣ ಸಮುದ್ರ ಪಾಲಾದ ಘಟನೆ ನಡೆದಿದೆ. ಉಳ್ಳಾಲದಲ್ಲಿ ಐದು ಮನೆಗಳು ಹಾಗೂ ಸೋಮೇಶ್ವರ ಉಚ್ಚಿಲದಲ್ಲಿ ಎರಡು ಮನೆಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸುತ್ತಿದೆ. ಕಿಲ್‌ರಿಯಾ ನಗರದಲ್ಲಿ ಮೈಮುನಾ ಇಕ್ಬಾಲ್ ಮತ್ತು ಝೊಹರಾ ಎಂಬವರ ಮನೆ ಸಂಪೂರ್ಣ ಸಮುದ್ರ ಪಾಲಾಗಿದೆ. ಉಳ್ಳಾಲ ಬೀಚ್ ಸಮೀಪದ ಅಲ್ಬುಕರ್ಕ್ ಅವರಿಗೆ ಸೇರಿದ ಸಮ್ಮರ್ ಸ್ಯಾಂಡ್ ರೆಸಾರ್ಟ್‌ನ ಶೌಚಾಲಯ ಕಟ್ಟಡ, ಉಚ್ಚಿಲ ಕೋಟೆ ಬಳಿ ವಿಶ್ವನಾಥ್ ಮತ್ತು ನಾಗೇಶ್ ಎಂಬವರ ಶೆಡ್, ಒಂದು ಗೆಸ್ಟ್ ಹೌಸ್ ಸಮುದ್ರ ಪಾಲಾಗಿವೆ.
ಖಲೀಲ್, ಝೊಹರಾ, ಝೈನಬಾ, ಝೊಹರಾ ರಹೀಂ, ಝುಬೇರಾ ನಸೀಮಾ, ಉಚ್ಚಿಲ ಪೆರಿಬೈಲುವಿನ ಭವಾನಿ, ರೋಹಿತ್ ಮಾಸ್ಟರ್, ವಿಶ್ವನಾಥ್ ಮತ್ತು ನಾಗೇಶ್, ಸೋಮೇಶ್ವರ ರುದ್ರಪಾದೆ ಸಮೀಪದ ಮೋಹನ್, ಹೇಮಚಂದ್ರ, ಬಾಲು ಎಂಬವರ ಮನೆಗಳಿಗೆ ಅಲೆಗಳು ಅಪ್ಪಳಿಸುತ್ತಿವೆ. ಮಸೀದಿ ಕಟ್ಟಡಗಳಿಗೂ ಅಲೆಗಳ ಹೊಡೆತ ಕಿಲ್‌ರಿಯಾ ಮಸೀದಿ ಮತ್ತು ಕೈಕೋದಲ್ಲಿರುವ ರಿಫಾಯಿಯ ಮಸೀದಿ ಕಟ್ಟಡಕ್ಕೂ ಅಲೆಗಳು ಅಪಾಯಕಾರಿಯಾಗಿ ಅಪ್ಪಳಿಸುತ್ತಿವೆ. ಸ್ಥಳದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಶಿವಾಜಿ ಜೀವ ರಕ್ಷಕ, ಜೀವರಕ್ಷಕ ಈಜುಗಾರರ ಸಂಘ, ಕರಾವಳಿ ನಿಯಂತ್ರಣ ದಳ, ಉಳ್ಳಾಲ ಠಾಣೆ ಪೊಲೀಸರು ೨೪ ಗಂಟೆಯ ಕಾಲ ಕಾರ್ಯಾಚರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

Leave a Comment