ಸಮಾಜ ಸುಧಾರಣೆಗೆ ವೇಮನ ಕೊಡುಗೆ ಅಪಾರ-ಬಿರಾದಾರ

ಧಾರವಾಡ,ಜ21- ಶ್ರೀ ಮಹಾಯೋಗಿ ವೇಮನರು ಒಂದೇ ಕುಲಕ್ಕೆ, ಒಂದೇ ಸಮಾಜಕ್ಕೆ ಸೀಮಿತವಾಗಿರದೇ ಸಮಾಜದ ಸುಧಾರಣೆಗಾಗಿ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ ಎಂದು ಧಾರವಾಡ ತಹಶೀಲ್ದಾರ ಸಂತೋಷಕುಮಾರ ಬಿರಾದಾರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ (ಜ.19) ಸಂಜೆ ನಗರದ ರಡ್ಡಿ ಕಾಲೋನಿಯ ಸರಸ್ವತಿಪುರದ ಶ್ರೀ ವೆಂಕಟೇಶ್ವರ ದೇವಸ್ಥಾನದ ಸಭಾಭವನದಲ್ಲಿ ಜರುಗಿದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ ಮನೆತನದಲ್ಲಿ ಜನಸಿದ ಮಹಾಯೋಗಿ ವೇಮನರು ವಯಸ್ಸಿನಲ್ಲಿ ಕೆಲವು ದುಶ್ಚಟಗಳಿಗೆ  ದಾಸರಾಗಿದ್ದರು. ನಂತರದ ದಿನಗಳಲ್ಲಿ ಅತ್ತಿಗೆ ಹೇಮರಡ್ಡಿ ಮಲ್ಲಮ್ಮ ಹಾಗೂ ಇತರ ದಾರ್ಶನಿಕರ ಪ್ರಭಾವದಿಂದ ಮಹಾನ್‍ಯೋಗಿಗಳಾಗಿ ತತ್ವಜ್ಞಾನಿಯಾಗಿ ಬದಲಾದರು. ಜಗತ್ತಿನಲ್ಲಿ ಜನಿಸಿದ ಪ್ರತಿಯೊಬ್ಬ ಮನುಷ್ಯರಲ್ಲಿ ಇಡೀ ಜಗತ್ತನ್ನು ಆಳುವ ಶಕ್ತಿ ಇರುತ್ತದೆ. ಆ ಶಕ್ತಿಯನ್ನು ನಾವು ಸದುಪಯೋಗ ಮಾಡಿಕೊಂಡರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ. ವೇಮನ ಅವರ ಜೀವನ ಶೈಲಿಯನ್ನು ಅರಿತವರು ಜೀವನದಲ್ಲಿ ಏನಾದರೂ ಸಾಧನೆ ಮಾಡಬಹುದು ಎಂದರು.
ಧಾರವಾಡದ ಶಾರದಾ ಪದವಿಪೂರ್ವ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ರಾಮಚಂದ್ರ ಪಾಟೀಲ್ ಅವರು ಮಹಾಯೋಗಿ ವೇಮನರ ಸಾಮಾಜಿಕ ಕೊಡುಗೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ, ಮಾತನಾಡುತ್ತಾ, ಮಹಾ ಮಾನವತಾವಾದಿ, ತತ್ವದರ್ಶಿ, ಸಮಾಜ ವಿಮರ್ಶಕ, ತೆಲಗು ಕವಿ, ಮತ್ರ್ಯಕ್ಕೆ ಅರ್ಥತುಂಬಿದವರು ಮಹಾಯೋಗಿ ವೇಮನರು, ಸ್ವತಂತ್ರ ವಿಚಾರವಾದಿ ಎಂದು ಆಂಧ್ರ ನಾಡಿನಲ್ಲಿ ಅವರ ಜೀವಿತದ ಕಾಲದಲ್ಲಿಯೇ ಮನೆ ಮಾತಾಗಿದ್ದರು. ತೆಲುಗು ಸಾರಸ್ವತ ಲೋಕದಲ್ಲಿ ಕಾಣಿಸಿಕೊಂಡ ಅಪರೂಪದ ಕೋಲ್ಮಿಂಚು ಅವರಾಗಿದ್ದರು ಎಂದು ಹೇಳಿದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕಿ ಡಾ.ರೇಣುಕಾ ಅಮಲಝರಿ ವಿಶೇಷ  ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲ ವ್ಹಿ.ಡಿ. ಕಾಮರೆಡ್ಡಿ, ಹಿರಿಯ ನ್ಯಾಯವಾದಿ ಕೆ.ಎಲ್.ಪಾಟೀಲ್, ಮಾಜಿ ಪಾಲಿಕೆ ಸದಸ್ಯ ರಘು ಲಕ್ಕಣ್ಣವರ, ಕರ್ನಾಟಕ ವಿಶ್ವವಿದ್ಯಾಲಯದ ಮಹಾಯೋಗಿ ವೇಮನ ಅಧ್ಯಯನ ಪೀಠದ ಸಂಯೋಜಕರಾದ ಡಾ.ಎಚ್.ಬಿ. ನಿಲಗುಂದ, ರಡ್ಡಿ ಸಮಾಜದ, ಕೆ.ವಿ. ತಿಮ್ಮಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ, ಸ್ವಾಗತಿಸಿ  ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಸೂಯಾ ನಿಲಗುಂದ ನಿರೂಪಿಸಿದರು

Leave a Comment