ಸಮಾಜ ವಿರೋಧಿ ವರದಿಗಳನ್ನು ನಿರ್ಧಾಕ್ಷಿಣ್ಯವಾಗಿ ಪ್ರಕಟಿಸಿ- ಮಾಜಿ ಸ್ಪೀಕರ್ ಕೃಷ್ಣ

ಕೆ.ಆರ್.ಪೇಟೆ,ಜ.12- ಉತ್ತಮ ಸಮಾಜ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರ ಅಪಾರವಾಗಿದೆ. ಸರ್ಕಾರಿ ಅಧಿಕಾರಿಗಳು ರಾಜಕಾರಣಿಗಳಿಗಿಂತಲೂ ವ್ಯಾಪಕ ಭ್ರಷ್ಠಾಚಾರದಲ್ಲಿ ಮುಳುಗಿದ್ದಾರೆ. ಪತ್ರಕರ್ತರು ಭ್ರಷ್ಠ ಅಧಿಕಾರಿಗಳು ಮಾಡುವ ಕೆಟ್ಟ ಕೆಲಸವನ್ನು ಯತಾವತ್ ಬರೆಯುವ ಮೂಲಕ ದೇಶದ ಅಭಿವೃದ್ಧಿಗೆ ತೊಡಕಾಗಿರುವ ಭ್ರಷ್ಠಾಚಾರವನ್ನು ಮಟ್ಟ ಹಾಕಲು ತಮ್ಮನ್ನು ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಬೇಕು. ರಾಜಕಾರಣಿಗಳು ಅಥವಾ ಅಧಿಕಾರಿಗಳು ಸಮಾಜ ವಿರೋಧಿ ಕೆಲಸ ಮಾಡಿದಾಗ ಎಚ್ಚರಿಸುವಂತಹ ವರದಿಗಳನ್ನು ನಿರ್ಧಾಕ್ಷಿಣ್ಯವಾಗಿ ಪ್ರಕಟಿಸುವ ಮೂಲಕ ತಮ್ಮ ಪತ್ರಿಕಾ ವೃತ್ತಿ ಧರ್ಮವನ್ನು ಕಾಪಾಡಬೇಕು ಎಂದು ನಾಡಿನ ಸರಳ ಸಜ್ಜನ ರಾಜಕಾರಾಣಿಗಳಾದ ರಾಜ್ಯ ವಿಧಾನಸಭೆಯ ಮಾಜಿ ಸ್ಪೀಕರ್ ಕೃಷ್ಣ ಅವರು ಹೇಳಿದರು.
ಅವರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಪ್ರೆಸ್ ಕ್ಲಬ್ ಮತ್ತು ತಾಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹೊರತರಲಾದ 2019ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಸಮಾಜದ ಬೆಳವಣಿಗೆಗೆ ಪತ್ರಕರ್ತರ ಸವಾಲುಗಳು ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗವು ಅತ್ಯಂತ ಪವಿತ್ರವಾದ ಹಾಗೂ ಜವಾಬ್ದಾರಿಯುತವಾದ ಅಂಗವಾಗಿದೆ. ಹಾಗಾಗಿ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಪತ್ರಕರ್ತರು ಸದಾ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಪತ್ರಕರ್ತರನ್ನು ಇಡೀ ಸಮಾಜವು ಒಳ್ಳೆಯ ದೃಷ್ಠಿಯಿಂದ ನೋಡುತ್ತಿರುತ್ತದೆ. ಹಾಗಾಗಿ ತಮ್ಮ ಲೇಖನಿಯಲ್ಲಿ ಸಮಾಜವನ್ನು ಜಾಗೃತಗೊಳಿಸುವಂತಹ ಹರಿತವಾದ ವರದಿಗಳನ್ನು ಬರೆಯಬೇಕು. ತಮ್ಮ ಒಂದು ವರದಿಯಿಂದ ಸಮಾಜದಲ್ಲಿ ಹೆಚ್ಚಾಗಿರುವ ಭ್ರಷ್ಠಾಚಾರ ನಿಲ್ಲಬೇಕು. ಅಧಿಕಾರಿಗಳ ಸೋಮಾರಿತನ ದೂರವಾಗಿ ಕ್ರಿಯಾಶೀಲರಾಗಬೇಕು. ಕೆಟ್ಟದನ್ನು ವೈಭವೀಕರಿಸಿ ಬರೆಯುವ ಬದಲು ಸಮಸ್ಯೆಗಳನ್ನು ವೈಭವೀಕರಿಸಿದರೆ ಅದಕ್ಕೆ ಪರಿಹಾರ ಸಿಕ್ಕಿ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಬ್ರೇಕಿಂಗ್ ನ್ಯೂಸ್ ಅನ್ನು ತಾವು ಮೊದಲು ಕೊಡಬೇಕೆಂಬ ಭರದಲ್ಲಿ ಊಹಾಪೋಹದ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂದು ಮನವಿ ಮಾಡಿದರು.
ಪತ್ರಕರ್ತರು ಪ್ರಜಾಪ್ರಭುತ್ವದ ಕಾವಲು ನಾಯಿಯಂತೆ ಕೆಲಸ ಮಾಡಬೇಕು. ರಾಜಕಾರಣಿಗಳು ತಮ್ಮ ಓಟಿನ ಆಸೆಗಾಗಿ ಜನರನ್ನು ಚುನಾವಣೆ ಸಮಯದಲ್ಲಿ ಆಮಿಷಗಳನ್ನು ಒಡ್ಡುವ ಮೂಲಕ ಮತಗಳನ್ನು ಪಡೆದು ತಾವು ಹಾಕಿದ ಬಂಡವಾಳವನ್ನು ವಾಪಸ್ ತೆಗೆಯಲು ಪ್ರಯತ್ನಿಸುತ್ತಾರೆ ಹಾಗಾಗಿ ಮತದಾರರು ತಮ್ಮ ಪವಿತ್ರವಾದ ಮತವನ್ನು ಮಾರಿಕೊಳ್ಳದೆ ಉತ್ತಮ ಅಭ್ಯರ್ಥಿಗೆ ಹಾಕಬೇಕು ಈ ಮೂಲಕ ತಮ್ಮ ಊರಿನ ಅಭಿವೃದ್ಧಿಗೆ ಮುಂದಾಗಬೇಕು ಈ ಹಿನ್ನೆಲೆಯಲ್ಲಿ ಮತದಾರರನ್ನು ಆಮಿಷಗಳಿಂದ ದೂರವಿರುವಂತೆ ಮಾಧ್ಯಮಗಳು ಜಾಗೃತಗೊಳಿಸುವ ತುರ್ತು ಅಗತ್ಯವಿದೆ. ಪವಿತ್ರ ಮತದಾನದಿಂದ ಸಮಾಜಕ್ಕೆ ಸಿಗುವ ಲಾಭಗಳನ್ನು ತಿಳಿಸಿಕೊಡಬೇಕು ಹಾಗೆಯೇ ಆಮಿಷಕ್ಕೆ ಒಳಗಾಗಿ ಮತ ನೀಡಿದಾಗ ರಾಜಕಾರಣಿಗಳು ಸಮಾಜಕ್ಕೆ ಮಾಡುವ ನಷ್ಟದ ಬಗ್ಗೆ ಸಮಗ್ರ ವರದಿ ಬರೆಯುವ ಮೂಲಕ ಸಮಾಜವನ್ನು ಉಳಿಸುವ ಕೆಲಸವನ್ನು ಪತ್ರಕರ್ತರು ಮಾಡಬೇಕು. ಇಲ್ಲದಿದ್ದರೆ ಪವಿತ್ರ ಪ್ರಜಾಪ್ರಭುತ್ವ ವ್ಯವಸ್ಥೆಯು ಸರಿಪಡಿಸಲಾಗದಷ್ಟು ಕೆಟ್ಟ ಹೋಗಲಿದೆ ಎಂದು ಮಾಜಿ ಸ್ಪೀಕರ್ ಕೃಷ್ಣ ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಹೊನ್ನೇನಹಳ್ಳಿ ವೇಣು, ಉಪಾಧ್ಯಕ್ಷ ಕೆ.ಟಿ.ಶ್ರೀನಿವಾಸ್, ಕಾರ್ಯದರ್ಶಿ ಟೆಂಪೋ ಶ್ರೀನಿವಾಸ್, ಕನ್ನಡಪರ ಹೋರಾಟಗಾರ ಕಿರಣ್‍ಕುಮಾರ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಜವರಾಯಿಗೌಡ, ಮಾಜಿ ತಾ.ಪಂ.ಸದಸ್ಯ ಗೂಡೇಹೊಸಹಳ್ಳಿ ಜವರಾಯಿಗೌಡ, ಎಸಿಡಿಪಿಓ ಪುಟ್ಟಸ್ವಾಮಿ, ತಾಲೂಕು ಪ್ರೆಸ್ ಕ್ಲಬ್ ಉಪಾಧ್ಯಕ್ಷ ಮೊಸಳೇಕೊಪ್ಪಲು ದಿನೇಶ್, ರಾಜ್ಯ ಮಾಧ್ಯಮ ಅಕಾಡೆಮೆ ಪ್ರಶಸ್ತಿ ಪುರಸ್ಕೃತರಾದ ಹೆಚ್.ಬಿ.ಮಂಜುನಾಥ್, ಪ್ರೆಸ್‍ಕ್ಲಬ್ ಸಹ ಕಾರ್ಯದರ್ಶಿ ಕೆ.ಪಿ.ಮಂಜುನಾಥ್, ನಿರ್ದೇಶಕರಾದ ಗುಂಡೂರಾವ್, ಗುಡ್ಡೇನಹಳ್ಳಿ ಪ್ರದೀಪ್, ಬೂಕನಕೆರೆ ಪ್ರಕಾಶ್, ಸಂತೇಬಾಚಹಳ್ಳಿ ನಟರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Comment