ಸಮಾಜಮುಖಿಯಾಗಿ ಬದುಕನ್ನು ಸಾಗಿಸಿ

ನರೇಗಲ್ಲ,ಆ1-ಗ್ರಾಮೀಣ ಭಾಗದ ಮಕ್ಕಳು ಜ್ಞಾನವಂತರಾಗಿ, ಪ್ರತಿಭಾ ಸಂಪನ್ನರಾಗಿ ನಾಡಿ ಸೇವೆಯಲ್ಲಿ ತೊಡಗಲಿ ಎಂದ ಉದ್ಧೇಶದಿಂದ ಲಿಂ. ಗುರು ಅನ್ನದಾನ ಸ್ವಾಮೀಜಿಗಳು 3 ವರ್ಷಗಳ ಕಾಲ 3 ಕೋಟಿ ಜಪಗೈದು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಅದರ ಫಲವಾಗಿ ಇಂದು ಈ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ ಎಂದು ಹಾಲಕೆರೆಯ ಡಾ. ಅಭಿನವ ಅನ್ನದಾನ ಸ್ವಾಮೀಜಿ ಹೇಳಿದರು.

 
ಅವರು ಸ್ಥಳೀಯ ಶ್ರೀ ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ಜರುಗಿದ ವಿವಿಧ ಸಾಂಘಿಕ ಚಟುವಟಿಕೆ, ತಂತ್ರಜ್ಞಾನ ಆಧಾರಿತ ಹಾಜರಾತಿ ಯಂತ್ರ ಉದ್ಘಾಟನೆ ಹಾಗೂ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

 
ಮಕ್ಕಳು ವಿದ್ಯಾಂತರಾಗುವುದರೊಂದಿಗೆ ಸಮಾಜದ ಅಭಿವೃದ್ಧಿಯ ಬಗ್ಗೆ ಆಲೋಚಿಸುವ ಗುಣವನ್ನು ಹೊಂದಬೇಕು. ಕೇವಲ ವೈಯಕ್ತಿಕ ಹಿತಾಸಕ್ತಿಯನ್ನು ನೋಡದೆ ಸಮಾಜದ ಹಿತಾಸಕ್ತಿಯನ್ನು ಬಯಸಬೇಕು. ಸ್ವಾರ್ಥಿಗಳಾಗಿ ಬದುಕಬಾರದು. ವಿದ್ಯಾರ್ಥಿ ಜೀವನವನ್ನು ತಪಸ್ಸಿನ ಹಾಗೆ ಜೀವಿಸಿದರೆ, ಮುಂದಿನ ಜೀವನ ಸುಖಕರವಾಗಲು ಸಾಧ್ಯ. ಉತ್ತಮ ಸಾಧನೆ ಮಾಡಲು ಕಠಿಣ ಪರಿಶ್ರಮ ಅವಶ್ಯಕ. ನಿಮ್ಮ ಮುಂದಿನ ಜೀವನ ಸಮಾಜಮುಖಿ ಜೀವನವಾಗಬೇಕು. ತಂದೆ-ತಾಯಿ, ಗುರುಗಳ, ಸಮಾಜದ ಖುಣವನ್ನು ತಿರಿಸಲು ಪ್ರಯತ್ನಿಸಬೇಕು. ಜೀವನದಲ್ಲಿ ಸಾಕಷ್ಟು ಕಷ್ಟಗಳು ಎದುರಾಗುತ್ತವೆ. ಅವುಗಳನ್ನು ಎದುರಿಸುವ ತಾಳ್ಮೆಯನ್ನು ಬೆಳೆಸಿಕೊಳ್ಳಬೇಕು ಎಂದರು.

 

 
ಪಚವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಹಿರೇಮಠ ಮಾತನಾಡಿ, ಈ ನಾಡಿನ ಹತ್ತು ಹಲವು ಮಠಗಳು ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿವೆ. ಅದರಲ್ಲೂ ನರೇಗಲ್ಲನ ಶ್ರೀ ಅನ್ನದಾನೇಶ್ವರ ಮಠವು ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಉತ್ತರ ಕರ್ನಾಟಕದ ಶಿಕ್ಷಣ ಕಾಶಿಯಾಗಿಸಿದ ಕೀರ್ತಿಗೆ ಪಾತ್ರವಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಹತ್ತು ಹಲವು ನೂತನ ತಂತ್ರಜ್ಞಾನವನ್ನು ಬಳಸಿಕೊಂಡಿರುವ ಈ ಕಾಲೇಜು ಜಿಲ್ಲೆಯ ಎಲ್ಲ ಕಾಲೇಜುಗಳಿಗೆ ಮಾದರಿಯಾಗಿದೆ. ಈ ಸಂಸ್ಥೆಯಲ್ಲಿ ಕಲಿತ ಅನೇಕರು ಇಂದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿರುವುದೆ ಇದಕ್ಕೆ ಸಾಕ್ಷಿಯಾಗಿದೆ. ನಿಮ್ಮ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ಸಾಧನೆ ನಿಮಗೆ ಪ್ರೇರಣೆಯಾಗಲಿ. ಅವರಂತೆ ನೀವುಗಳು ಸಾಧಕರಾಗಿ ಸಮಾಜದ ಸೇವೆಯಲ್ಲಿ ತೋಡಗಿಸಿಕೊಳ್ಳಿ ಎಂದರು.

 

 
2017-18ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಡಿಸ್ಟಿಂಗ್‍ಷನ್ 112 ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಮಸ್ಕಿ ಪಿಎಸ್‍ಐ ಅಮರೇಶ ಹುಬ್ಬಳ್ಳಿ,  ಕಲಬುರ್ಗಿ ವಿಭಾಗದ ಅಗ್ನಿ ಶಾಮಕ ಅಧಿಕಾರಿ ಪರಶುರಾಮ, ಕಾಲೇಜು ಚೇರಮನ್ ಡಾ. ಎಸ್. ಎ. ಪಾಟೀಲ ಮಾತನಾಡಿದರು. ಖ್ಯಾತ ವಾಗ್ಮಿ ಸುಧಾ ಬರಗೂರ ನಡೆಸಿಕೊಟ್ಟ ಹಾಸ್ಯ ಕಾರ್ಯಕ್ರಮ ವಿದ್ಯಾರ್ಥಿಗಳನ್ನು ರಂಜಿಸಿತು. ಆಡಳಿತಾಧಿಕಾರಿ ಎಸ್.ಜಿ. ಹಿರೇಮಠ, ಸಂಸ್ಥೆ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಸೋಮನಕಟ್ಟಿ, ಓಪ್ಟ್ರಾ ಸಂಸ್ಥೆ ಮುಖ್ಯಸ್ಥ ಶರಣ್ ಮಡಿವಾಳ, ಆಡಳಿತ ಮಂಡಳಿ ಸದಸ್ಯ ಬಸವರಾಜ ಕಳಕಣ್ಣವರ ಸೇರಿದಂತೆ ಇತರರು ಇದ್ದರು. ಪ್ರಚಾರ್ಯ ವೈ.ಸಿ. ಪಾಟೀಲ ಸ್ವಾಗತಿಸಿದರು. ಉಪನ್ಯಾಸಕ ಎಫ್.ಎನ್. ಹುಡೇದ ನಿರ್ವಹಿಸಿದರು.

Leave a Comment