ಸಮಾಜದ ಸವಾಂಗೀಣ ಬೆಳವಣಿಗೆಗೆ ಸಂಸ್ಕೃತ ಅನಿವಾರ್ಯ

ತುಮಕೂರು, ಸೆ. ೧೧- ಆಚಾರ, ವಿಚಾರ, ದಿನಚರ್ಯೆ, ಜೀವನ ಪದ್ಧತಿ ಇತ್ಯಾದಿಗಳು ಗುಣಾತ್ಮಕವಾಗಿ ಬದಲಾವಣೆಯಾಗಬೇಕಾಗಿದೆ. ಇಂತಹ ಬೆಳವಣಿಗೆಯಲ್ಲಿ ಸಂಸ್ಕೃತ ಭಾಷೆಯ ಸಾಹಿತ್ಯವು ಮುಖ್ಯವಾಗಿದೆ ಎಂದು ಕನ್ನಿಕಾಪರಮೇಶ್ವರಿ ದೇವಾಲಯ ಮತ್ತು ಸಂಸ್ಕಾರ ಭಾರತೀಯ ಜಿಲ್ಲಾಧ್ಯಕ್ಷ ಡಾ. ಆರ್.ಎಲ್.ರಮೇಶ್‌ಬಾಬು ಹೇಳಿದರು.

ನಗರದ ಸೋಮೇಶ್ವರಪುರದ ವಾಸವಿ ಸಭಾಂಗಣದಲ್ಲಿ ಸಂಸ್ಕೃತ ಭಾರತೀ ಸಂಸ್ಥೆಯ ಕರ್ನಾಟಕ ದಕ್ಷಿಣ ಪ್ರಾಂತದ ರಾಜ್ಯ ಕಾರ್ಯಕರ್ತರ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇವಾಲಯಗಳು ಕೇವಲ ಪೂಜೆ, ಪ್ರಸಾದಕ್ಕಷ್ಟೇ ಸೀಮಿತವಾಗದೆ ಪ್ರವಚನ, ಚಿಂತನೆ, ಸತ್ಸಂಗ, ಯೋಗ, ಸಂಗೀತ, ಗಮಕ, ಸಂಸ್ಕೃತ, ಜನಪದ ಸಾಹಿತ್ಯ ಸಭೆ, ವಚನ ಸಾಹಿತ್ಯ ಸಭೆ ಮೊದಲಾದವುಗಳು ನಡೆಯಬೇಕು ಎಂಬುದು ಕಾಲದ ಕರೆಯಾಗಿದೆ. ತುಮಕೂರಿನಲ್ಲಿ ಸಂಸ್ಕೃತ ಚಟುವಟಿಕೆಗಳು ವ್ಯಾಪಕವಾಗಿ ನಡೆಯುತ್ತಿದ್ದು, ಅದಕ್ಕಾಗಿ ಒಂದು ಸೂಕ್ತ ಕಾರ್ಯಾಲಯವನ್ನು ನಗರದ ಹೃದಯ ಭಾಗದಲ್ಲಿ ಒದಗಿಸಿಕೊಡುವುದಾಗಿ ತಿಳಿಸಿದರು.

ಪ್ರಸ್ತುತ ಲಕ್ಷಾಂತರ ಜನರಲ್ಲಿ ಹಣದ ಹೊಳೆಯು ಹರಿಯುತ್ತಿದೆ. ಆ ಹಣದ ನಿರ್ಧಿಷ್ಟ ಭಾಗವು ಸಮಾಜದ ಸೇವಾ ಕಾರ್ಯಗಳಿಗೆ ವಿನಿಯೋಗವಾಗುವುದಾದರೆ ಆಗ ಅಂತಹ ಹಣವು ಸಾರ್ಥಕವಾಗುತ್ತದೆ. ಇಂದು ಸಂಸ್ಕಾರವಿಲ್ಲದ ಶಿಕ್ಷಿತ ಜನಾಂಗ ನಿರ್ಮಿತವಾಗುತ್ತಿದೆಯೆಂಬುದೊಂದು ದೊಡ್ಡ ನ್ಯೂನ್ಯತೆಯಾಗಿದೆ. ಈ ನ್ಯೂನ್ಯತೆಯನ್ನು ಪರಿಹರಿಸುವಲ್ಲಿ ಸಂಸ್ಕೃತ ಭಾಷೆಯ ಪಾತ್ರವು ವಿಶಿಷ್ಟವಾಗಿದೆ ಎಂದರು.

ಸಂಸ್ಕೃತವು ಭಾರತವನ್ನಲ್ಲದೆ, ಪ್ರಪಂಚವನ್ನೇ ಸಮೃದ್ಧಗೊಳಿಸಬೇಕು. ಒತ್ತಡ, ಖಿನ್ನತೆ, ಆತ್ಮಹತ್ಯೆ ಇತ್ಯಾದಿಗಳು ಉನ್ನತ ಶಿಕ್ಷಣ ಪಡೆದ ಯುವಸಮೂಹದಲ್ಲಿ ಅಲ್ಲಲ್ಲಿ ಸಂಭವಿಸುತ್ತಿವೆ. ಆದರೆ ಸಂಸ್ಕೃತ ತಜ್ಞರಲ್ಲಿ ಇಂತಹ ಹೀನ ಚಿಂತನೆ ಇಲ್ಲವೆಂಬುದು ಉಲ್ಲೇಖಾರ್ಹ ವಿಷಯವಾಗಿದೆ ಎಂದು ಹೇಳಿದರು.

ಸಂಸ್ಕೃತ ಭಾರತೀ ಸಂಸ್ಥೆಯ ಕರ್ನಾಟಕ ದಕ್ಷಿಣ ಪ್ರಾಂತದ ಅಧ್ಯಕ್ಷ ಪ್ರೊ. ಟಿ.ಎನ್.ಪ್ರಭಾಕರ್ ಮಾತನಾಡಿ, ಇಂದು ಸಂಸ್ಕೃತವೆಂಬುದು ಅಂತಾರಾಷ್ಟ್ರೀಯ ವಲಯದಲ್ಲಿ ವಿಖ್ಯಾತವಾಗಿದೆ. ಅಂತಾರಾಷ್ಟ್ರೀಯ ಸಂಸ್ಕೃತ ಅಧ್ಯಯನ ಸಂಸ್ಥೆಯು ವಿದೇಶಗಳಲ್ಲಿ ಸ್ಥಾಪಿತರಾಗಿ 50 ವರ್ಷಗಳು ಸಂದಿವೆ. ಜುಲೈ ತಿಂಗಳಿನಲ್ಲಿ 17ನೆಯ ತ್ರೈವಾರ್ಷಿಕ ತ್ರಿದಿವಸೀಯ ಸಮ್ಮೇಳನವು ಕೆನಡಾ ದೇಶದ ವ್ಯಾಂಕೋವರ ನಗರದಲ್ಲಿ ನಡೆಯಿತು. ಮುಂದಿನ ಸಮ್ಮೇಳನವು

ಆಸ್ಟ್ರೇಲಿಯಾ ದೇಶದಲ್ಲಿ 2021 ರ ಜನವರಿಯಲ್ಲಿ ನಡೆಯಲಿದೆ ಎಂದರು.
ಸಂಸ್ಕೃತ ಭಾರತೀ ಕಾರ್ಯದರ್ಶಿ ಗುರುರಾವ್ ಕುಲಕರ್ಣಿ ಸ್ವಾಗತಿಸಿದರು. ಡಾ. ಸಚಿನ್‌ಕಠಾಳೆ ವಂದಿಸಿದರು.

Leave a Comment