ಸಮಾಜದ ಪರಿವರ್ತನೆಗೆ ಜ್ಞಾನ, ಬೆಳಕು ನೀಡಿದ ಮಠಮಾನ್ಯಗಳ ಕೊಡುಗೆ ಶ್ಲಾಘನೀಯ;ಕನಕಪುರ ಶ್ರೀ ದೇಗುಲ ಮಠಕ್ಕೆ ಉತ್ತರಾಧಿಕಾರಿ ನೇಮಕ

ಮೈಸೂರು, ಮಾ.14- ಸಮಾಜದ ಪರಿವರ್ತನೆ ಜ್ಞಾನ, ಬೆಳಕು ನೀಡಿದ ಮಠ ಮಾನ್ಯಗಳ ಕೊಡುಗೆ ಸ್ಮರಣೀಯವಾದದ್ದು ಎಂದು ಕನಕಪುರ ಮಳ್ಳೆ ಗವಿಮಠ ಶ್ರೀಗಳಾದ ಶ್ರೀ ಶಿವರುದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಂದು ಬೆಳಿಗ್ಗೆ ಸುತ್ತೂರು ಶಾಖಾ ಮಠದ ಆವರಣದಲ್ಲಿ ಕನಕಪುರ ಶ್ರೀ ದೇಗುಲ ಮಠದ ಉತ್ತರಾಧಿಕಾರಿ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಕನಕಪುರ ಶ್ರೀ ದೇಗುಲ ಮಠಕ್ಕೆ 700 ವರ್ಷಗಳ ಇತಿಹಾಸವಿದೆ. ಈ ಮಠ 45 ವಿದ್ಯಾಸಂಸ್ಥೆಗಳನ್ನು ಹೊಂದಿದ್ದು, ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಒತ್ತು ನೀಡಿದೆ. ಸುಮಾರು 2000 ವಿದ್ಯಾರ್ಥಿಗಳು ಶಿಕ್ಷಣ ಹಾಗೂ ವಸತಿ ಸೌಲಭ್ಯ ಪಡೆದಿದ್ದಾರೆ. 13ನೇ ಮಠಾಧಿಪತಿಗಳಾಗಿದ್ದ ಶ್ರೀ ಮಹಲಿಂಗ ಸ್ವಾಮೀಜಿ ಅವರು 21-5-2013 ರಂದು ಧೈವಧೀನರಾದ ಸಂಬಂಧ ಸೂಕ್ತ ಮಠಾಧೀಶರನ್ನಾಗಿ ನೇಮಕ ಮಾಡಲು ವಟುಗಳ ಅನ್ವೇಷಣೆಯಲ್ಲಿ ತೊಡಗಿಸಿಕೊಳ್ಳಲಾಗಿತ್ತು. ಸುತ್ತೂರು ಶ್ರೀಗಳ ಆಶ್ರಯದಂತೆ ಶಶಿಕುಮಾರ್ ಎಂಬ ಸ್ನಾತಕ್ಕೋತ್ತರ ಪದವಿ ಪಡೆದ ವ್ಯಕ್ತಿಯನ್ನು ಆಯ್ಕೆ ಮಾಡಲಾಯಿತು. ಸಮಾಜದ ಎಲ್ಲಾ ಮಠಾಧೀಶರ ಹಾಗೂ ಗುರುಹಿರಿಯರ ಅಪ್ಪಣೆ ಮೇರೆಗೆ ಶಶಿಕುಮಾರ್ ಅವರನ್ನು ಶ್ರೀ ದೇಗುಲ ಮಠದ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು.
ಭವ್ಯ ಪರಂಪರೆ ಆಧ್ಯಾತ್ಮಿಕ ಹಿನ್ನೆಲೆಯುಳ್ಳ ಶ್ರೀ ದೇಗುಲ ಮಠ ಇತಿಹಾಸ ಪ್ರಸಿದ್ಧಿ ಹೊಂದಿದೆ. ದಾಸೋಹದ ಜೊತೆಗೆ ಜ್ಞಾನದ ದಾಸೋಹವನ್ನು ನೀಡುತ್ತಾ ಧೀನದಲಿತರ ಬಡವರ ಕಲ್ಯಾಣಕ್ಕಾಗಿ ಅಹರ್ನಿಶಿ ದುಡಿಯುತ್ತಿದೆ. ಇದಕ್ಕೆ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿಯವರ ಕೊಡುಗೆ ಇದೆ ಎಂದರೇ ತಪ್ಪಾಗಲಾರದು. ರಾಜ್ಯದಲ್ಲಿ ವೀರಶೈವ ಲಿಂಗಾಯತ ಮಠಾಧಿಪತಿಗಳು ಸಮಾಜದ ಪರಿವರ್ತನೆಗೆ ಮುಂದಾಗಿದ್ದು, ಸಾಮಾನ್ಯ ಜನರ ಕಷ್ಟ ಸುಖಗಳಿಗೆ ಸ್ಪಂಧಿಸುತ್ತಿವೆ. ಆಗಾಗಿ ಮಠ ಮಾನ್ಯರುಗಳ ಕೊಡುಗೆ ಸ್ಮರಣೀಯವಾದದ್ದು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ವಿ.ಸೋಮಣ್ಣ ಮಾತನಾಡಿ ಸುತ್ತೂರು ಹಾಗೂ ಸಿದ್ದಗಂಗಾ ಕ್ಷೇತ್ರ ಭಕ್ತರ ತಾಣವಾಗಿದೆ. ಜಾತಿ ರಹಿತವಾದ ತಾಣವಾಗಿದ್ದು, ಇಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿ ಶಿಕ್ಷಣ ನೀಡುತ್ತಿದೆ. ವೀರಶೈವ ಲಿಂಗಾಯತ ಧರ್ಮದ ಎರಡು ಕಣ್ಣುಗಳೆಂದರೆ ಒಂದು ಸುತ್ತೂರು ಇನ್ನೊಂದು ಸಿದ್ದಗಂಗಾ ಕ್ಷೇತ್ರ ಮಾತ್ರ. ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯದೇ ಮಠವನ್ನು ನಡೆಸುತ್ತಾ ಸಮಾಜದ ಉದ್ಧಾರಕ್ಕಾಗಿ ಶ್ರಮಿಸುತ್ತಿವೆ. ಆಗೆಯೇ ಸುತ್ತೂರು ಶ್ರೀಗಳ ಆಶ್ರಯದಂತೆ ನೂತನವಾಗಿ ಶ್ರೀದೇಗುಲ ಮಠಕ್ಕೆ ನೇಮಕವಾಗುತ್ತಿರುವ ಶಶಿಕುಮಾರ್ ವಿಧ್ಯೆ, ವಿನಯಗಳನ್ನು ರೂಢಿಸಿಕೊಂಡು ಶ್ರೀಮಠದ ಬೆಳವಣಿಗೆಗೆ ಮುಂದಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ವಾಟಾಳಿನ ಶ್ರೀ ಸಿದ್ದಲಿಂಗಾ ಶಿವಾಚಾರ್ಯ ಸ್ವಾಮೀಜಿ, ಬೆಟ್ಟದಪುರದ ಶ್ರೀ ಚೆನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಹೊಸಮಠದ ಶ್ರೀ ಚಿದಾನಂದಸ್ವಾಮೀಜಿ, ಸಾಲೂರು ಮಠದ ಸ್ವಾಮೀಜಿ ಸೇರಿದಂತೆ ನೂರಾರು ವೀರಶೈವ ಲಿಂಗಾಯತ ಮುಖಂಡರು ಪಾಲ್ಗೊಂಡಿದ್ದರು.

Leave a Comment