ಸಮಾಜದ ಏಳ್ಗೆಗೆ ಯುವಕರು ಮುಂದಾಗಲಿ: ಸ್ವಾಮೀಜಿ

ತುಮಕೂರು, ‌ಡಿ. ೭- ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಯುವಕರು ಶ್ರಮಿಸುವಂತಾಗಬೇಕು ಎಂದು ಶಿವಗಂಗೆಯ ಮೇಲಣಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ವಿಶಾಲಾಕ್ಷಮ್ಮ ಸದಾಶಿವಯ್ಯ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ, ಜಿಲ್ಲಾ ಘಟಕದ ವತಿಯಿಂದ ಹಾನಗಲ್ ಕುಮಾರಸ್ವಾಮಿಯವರ 150ನೇ ವರ್ಷದ ಅಂಗವಾಗಿ 2016-17ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬದಲಾಗುತ್ತಿರುವ ಸಮಾಜಕ್ಕೆ ಉತ್ತಮ ಮಾರ್ಗದರ್ಶನದ ಅಗತ್ಯವಿದೆ. ಹಿರಿಯ ಆದರ್ಶಗಳನ್ನು, ಜೀವನದ ಮೌಲ್ಯಗಳನ್ನು ತಿಳಿದುಕೊಂಡು ಅವರ ಮಾರ್ಗದರ್ಶನದಲ್ಲಿ ಜವಾಬ್ದಾರಿಯುತವಾಗಿ ಯುವ ಪೀಳಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಇಂದಿನ ವಿದ್ಯಾರ್ಥಿಗಳಿಗೆ ಇತಿಹಾಸ, ಗುರು-ಹಿರಿಯರ ಹಿನ್ನೆಲೆ ಅರಿವು ಅತ್ಯವಶ್ಯ. ಪ್ರಸ್ತುತ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆ ಬದಲಾವಣೆಯಾಗುತ್ತಿದ್ದು, ತಂತ್ರಜ್ಞಾನ ಹೆಚ್ಚಾಗಿ, ಹಿಂದಿನ ಕಲಿಕೆಯನ್ನು ಮರೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಶಿಕ್ಷಣ ಕೇವಲ ಮಾಹಿತಿ ಆಧಾರಿತ, ಅಂಕ ಆಧಾರಿತ ಶಿಕ್ಷಣವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸೃಜನಶೀಲತೆಯ ವ್ಯಕ್ತಿತ್ವ, ಮಾನವೀಯ ಮೌಲ್ಯ, ಸಮಾಜದ ನೈತಿಕತೆ ರೂಪಿಸುವಲ್ಲಿ ವಿಫಲವಾಗುತ್ತಿದೆ ಎಂದರು.

ಇಂದಿನ ವಿದ್ಯಾರ್ಥಿಗಳು ಮುಂದಿನ ಉತ್ತರಾಧಿಕಾರಿಗಳಾಗಿ ಬೆಳೆದು, ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢರಾಗಬೇಕು. ಪೋಷಕರು ಮಕ್ಕಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು. ಗುರುಗಳು ಪಠ್ಯದ ಕಲಿಕೆ ಹೊರತುಪಡಿಸಿ ಅವರಲ್ಲಿ ಚೈತನ್ಯ ತುಂಬುವಂತಹ ಸ್ಫೂರ್ತಿದಾಯಕ ಕೆಲಸ ಮಾಡಬೇಕು ಎಂದು ಸಲಹೆಯಿತ್ತರು.

ಆಧುನಿಕ ಜಗತ್ತಿನಲ್ಲಿ ಮಕ್ಕಳನ್ನು ಮಠದ ಶಾಲಾ-ಕಾಲೇಜುಗಳಿಗೆ ಸೇರುವುದು ತೀರಾ ಕಡಿಮೆಯಾಗಿದೆ. ಇಂಟರ್ ನ್ಯಾಷನಲ್ ಸ್ಕೂಲ್-ಕಾಲೇಜುಗಳ ಮೊರೆ ಹೋಗುತ್ತಿದ್ದಾರೆ. ಆದರೆ ಶಿಕ್ಷಣದ ಜತೆಗೆ ಮುಂದಿನ ಜೀವನದ ಎಡರು-ತೊಡರುಗಳನ್ನು ಕಲಿಸುವುದು ಮಠಗಳಿಂದ ಮಾತ್ರ ಸಾಧ್ಯವಾಗುತ್ತದೆ ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಸಿ.ವಿ. ಮಹದೇವಯ್ಯ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಕಲಿಕೆ ಎಂಬುದು ತಂತ್ರಜ್ಞಾನದಿಂದ ಕೂಡಿದ್ದು, ಹೆಚ್ಚು ಬದಲಾವಣೆಯನ್ನು ಹೊಂದುತ್ತಿದೆ. ಈ ನಿಟ್ಟಿನಲ್ಲಿ ಇಂದಿನ ಮಕ್ಕಳು ಸಮಾಜದ ಏಳ್ಗೆಗಾಗಿ, ಪೋಷಕರಿಗೆ, ಶಾಲಾ-ಕಾಲೇಜುಗಳಿಗೆ ಋಣಿಯಾಗಿ ಅವರಿಗೆ ಗೌರವವನ್ನು ತಂದು ಕೊಡಬೇಕು. ಪ್ರತಿಭಾವಂತ ವ್ಯಕ್ತಿಗಳನ್ನು ನೋಡಿ ಇನ್ನೊಬ್ಬ ವ್ಯಕ್ತಿ ರೂಢಿಸಿಕೊಂಡು ಯಶಸ್ವಿಯಾದರೆ ಅದು ನಿಜವಾದ ಪ್ರತಿಭೆ. ಶಿಕ್ಷಣ ಇಂದು ಸಾಮಾಜಿಕ ಜೀವನದ ಒಂದು ಅಂಗವಾಗಿದೆ ಎಂದರು.

ಮಕ್ಕಳಿಗೆ ಸ್ವಂತ ಆಲೋಚನೆ, ವಿಚಾರ ವಿನಿಮಯ ಮಾಡುವ ಸಾಮರ್ಥ್ಯ ಇರಬೇಕು. ಅದಕ್ಕೆ ಪೂರಕವಾಗಿ ಶಿಕ್ಷಣವನ್ನು ನೀಡಬೇಕಾಗಿದೆ. ಶ್ರಮ ಎನ್ನುವುದು ಶ್ರೇಷ್ಠ. ಆದರೆ ಅರ್ಥ ಮಾಡಿಸುವುದು ಕಷ್ಟಕರ. ಈ ನಿಟ್ಟಿನಲ್ಲಿ ಮನುಷ್ಯನ ಮನಸ್ಸು ಬಹಳ ಶ್ರೇಷ್ಠ ಅದು ಸಮಾಧಾನವಿದ್ದಲ್ಲಿ ಎಲ್ಲವೂ ಸಾಧಿಸಬಹುದು. ಪೋಷಕರು ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಅವರು ಆಸಕ್ತಿ ತೋರುವ ಕ್ಷೇತ್ರಗಳಲ್ಲಿ ಸಾಧಿಸಲು ಸ್ಫೂರ್ತಿ ನೀಡಬೇಕು. ಇಂದು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ವ್ಯಾಪಾರೀಕರಣವಾಗುತ್ತಿದ್ದು, ಲಕ್ಷಾಂತರ ರೂ.ಗಳನ್ನು ಖಾಸಗಿ ಕ್ಷೇತ್ರಗಳಿಗೆ ನೀಡುತ್ತಿರುವುದು ಶೋಚನೀಯ. ಸಮಾಜದ ಆಗು-ಹೋಗುಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್. ಶಿವಣ್ಣ, ಮಾಜಿ ಸಂಸದ ಜಿ.ಎಸ್. ಬಸವರಾಜು, ಸಂಘದ ಉಪಾಧ್ಯಕ್ಷ ಎಸ್.ಜಿ. ಚಂದ್ರಮೌಳಿ, ಹೆಚ್.ಎನ್. ಶಿವಕುಮಾರ್, ಮೋಹನ್‌ಕುಮಾರ್ ಪಟೇಲ್, ಸದಾಶಿವಯ್ಯ, ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ 2016-17ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯ 248 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿ 1500 ರೂ. ನಗದು ನೀಡಿ ಗೌರವಿಸಲಾಯಿತು.

Leave a Comment