ಸಮಾಜಘಾತುಕರಿಗೆ ಬೊಮ್ಮಾಯಿ ಎಚ್ಚರಿಕೆ

ಬೆಂಗಳೂರು, ಫೆ. ೨೦- ಸಮಾಜಘಾತಕ ಶಕ್ತಿಗಳಿಗೆ ಯಾವುದೇ ರಾಜಕೀಯ ಪಕ್ಷ ಸಂಘಟನೆಗಳು ಬೆಂಬಲ ನೀಡಬಾರದು. ಕಾನೂನನ್ನು ಕೈಗೆತ್ತಿಕೊಳ್ಳುವ ದುಷ್ಟ ಶಕ್ತಿಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜಬೊಮ್ಮಾಯಿ ವಿಧಾನಪರಿಷತ್‌ನಲ್ಲಿಂದು ಎಚ್ಚರಿಕೆ ನೀಡಿದರು.
ಮಂಗಳೂರಿನಲ್ಲಿ ಮುಂದಾಗುವ ದೊಡ್ಡ ಮಟ್ಟದ ಅನಾಹುತವನ್ನು ತಪ್ಪಿಸುವ ಸಲುವಾಗಿ ಗೋಲಿಬಾರ್ ಮಾಡಲಾಗಿದೆ ಎಂದು ಪ್ರಕರಣವನ್ನು ಸಮರ್ಥಿಸಿಕೊಂಡರು.
ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಕಳೆದ ಎರಡು ದಿನಗಳಿಂದ ನಡೆದ ಸುದೀರ್ಘ ಚರ್ಚೆಗೆ ಉತ್ತರ ನೀಡಿದ ಸಚಿವರು, ಮಂಗಳೂರು ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟಿರುವುದು ನಮಗೂ ನೋವು ತಂದಿದೆ. ಆದರೆ ಏನು ಮಾಡುವುದು. ಕಾನೂನನ್ನು ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಗೋಲಿಬಾರ್ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಹೇಳಿದರು.
ಮಂಗಳೂರು ಗಲಭೆ ಪ್ರಕರಣವನ್ನು ಹತೋಟಿಗೆ ತರಲು ಪೊಲೀಸರು, ಮುಸ್ಲಿಂ ಸಂಘಟನೆಗಳ ಸಹಾಯದೊಂದಿಗೆ ಇನ್ನಿಲ್ಲದ ಹರಸಾಹಸ ನಡೆಸಿದರು ಯಾವುದೇ ಪ್ರಯೋಜನವಾಗಲಿಲ್ಲ. ಪ್ರಕರಣದ ಬಗ್ಗೆ ಈಗಾಗಲೇ ಸಿಐಡಿ ತನಿಖೆ ಮತ್ತು ಮ್ಯಾಜಿಸ್ಟ್ರೇಟರ್ ತನಿಖೆ ನಡೆಯುತ್ತಿದೆ. ಈ ತಿಂಗಳ 24 ರಂದು ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಬರಲಿದ್ದು, ಅಲ್ಲಿ ಇದುವರೆಗಿನ ತನಿಖೆಯ ಪ್ರಗತಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದರು.
ರಾಜ್ಯದಲ್ಲಿ ಇದುವರೆಗೆ ನಡೆದಿರುವ ಯಾವುದೇ ನ್ಯಾಯಾಂಗ ತನಿಖೆ ವರದಿಯನ್ನು ನಾನಾ ಕಾರಣಕ್ಕಾಗಿ ಅನುಷ್ಠಾನ ಮಾಡಿಲ್ಲ. ಹೀಗಾಗಿ ಮಂಗಳೂರು ಗೋಲಿಬಾರ್ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸುವ ಅಗತ್ಯವಿಲ್ಲ ಎನ್ನುವುದನ್ನು ಪರೋಕ್ಷವಾಗಿ ಒತ್ತಿ ಹೇಳಿದರು.
ಮಂಗಳೂರಿನಲ್ಲಿ ನಡೆದ ಗಲಭೆ ಹಿಂದೂ, ಮುಸ್ಲಿಂರ ನಡುವೆ ಸಂಬಂವಿಸಿದಲ್ಲ ಅದನ್ನು ಮೀರಿ ನಡೆದಿರುವ ಗಲಭೆ. ವ್ಯವಸ್ಥಿತಿ ಸಂಚು ರೂಪಿಸಿ ರಾಜ್ಯದಲ್ಲಿ ಪ್ರಚೋಜದನೆ ನಡೆಸುವ ಹುನ್ನಾರ ಮಾಡಲಾಯಿತು. ಎಂದು ಅವರು ಹೇಳಿದರು.
ಮಂಗಳೂರು ಗಲಭೆಗೆ ಸಂಬಂಧಿಸಿದಂತೆ 2133 ಮಂದಿಯನ್ನು ವಿಚಾರಣೆ ನಡೆಸಿ 373 ಮಂದಿಗೆ ನೆಟ್‌ವರ್ಕ್ ಆಧರಿಸಿ ನೋಟೀಸ್ ನೀಡಲಾಗಿದೆ. ಅವರೆಲ್ಲಾ ಕೇರಳದ ಕಾಸರಗೋಡಿನವರು ಎನ್ನುವುದು ತಿಳಿದು ಬಂದಿದೆ. ಸಕಾರಣ ನೀಡಿದರೆ ಬಿಟ್ಟು ಬಿಡುತ್ತೇವೆ. ಉತ್ತರ ತೃಪ್ತಿಯಾಗದಿದ್ದರೆ ಅನಿವಾರ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯನ್ನು ಹತ್ತಿಕ್ಕುವ ಯಾವುದೇ ಕೆಲಸವನ್ನು ಸರ್ಕಾರ ಮಾಡಿಲ್ಲ. ಕಾನೂನು ಕೈಗೆತ್ತಿಕೊಂಡವರ ವಿರುದ್ಧವಷ್ಟೆ ಹಲವು ಬಾರಿ ಮನವಿ, ಎಚ್ಚರಿಕೆ ನೀಡಿ ಕೊನೆಗೆ ಗೋಲಿಬಾರ್ ನಡೆಸಲಾಗಿದೆ ಎಂದರು.
ಕೇರಳ ಮುಖ್ಯಮಂತ್ರಿ ಪಿಳರಾಯಿ ವಿಜಯನ್ ಅವರು, ಸಿಎಎ ಹೆಸರಲ್ಲಿ ಎಸ್‌ಟಿಪಿಐ ಮತ್ತು ಟಿಎಫ್ಐ ಸಂಘಟನೆಗಳು ಹಿಂಸೆ ನಡೆಸಲು ಮುಂದಾಗಿವೆ ಎಂದು ಅವರೇ ಹೇಳಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿದರೂ ಎಲ್ಲಿಯೂ ಅಹಿತಕರ ಘಟನೆ ನಡೆಯಲಿಲ್ಲ. ಮಂಗಳೂರಿನಲ್ಲಿ ಮಾತ್ರ ಇಂತಹ ಘಟನೆ ನಡೆಯಲು ಕೆಲವು ದುಷ್ಟಶಕ್ತಿಗಳ ಹುನ್ನಾರವೇ ಕಾರಣ ಎಂದು ತಿಳಿಸಿದರು.
ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಹುಬ್ಬಳಿಯ ಈದ್ಗಾ ಮೈದಾನದ ಆರು ವರ್ಷದ ಸಮಸ್ಯೆಯನ್ನು 6 ದಿನಗಳಲ್ಲಿ ತಾವು ಮತ್ತು ಸಿ.ಎಂ. ಇಬ್ರಾಹಿಂ ಬಗೆಹರಿಸಿದ್ದೇವೆ. ಅಲ್ಲದೆ ಗೋಕಾಕ್ ಚಳವಳಿ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿರಲಿಲ್ಲ ಎಂದು ಹಳೆಯ ಘಟನೆಗಳನ್ನು ಮೆಲುಕು ಹಾಕಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕೈಗೆತ್ತಿಕೊಂಡು ಶಾಂತಿಗೆ ಭಂಗ ತರುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

Leave a Comment