ಸಮಾಜಕ್ಕಾಗಿ ಬದುಕು ಸವೆಸಿದ ಸಿದ್ದಗಂಗಾಶ್ರೀ

ತುಮಕೂರು, ಜ. ೨೦- ಬದುಕಿದ ಪ್ರತಿಕ್ಷಣವೂ ವ್ಯರ್ಥವಾಗದಂತೆ ದಿನದ 24 ಗಂಟೆಯೂ ಸಮಾಜ ಸೇವೆಗೆ ತಮ್ಮ ಬದುಕನ್ನು ಮುಡುಪಾಗಿಟ್ಟ ಅಪೂರ್ವ ಚೇತನ ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಎಂದು ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಬಣ್ಣಿಸಿದರು.

ನಗರದ ಸಿದ್ದಗಂಗಾ ಮಠದಲ್ಲಿ ನಡೆದ ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಪ್ರಥಮ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗಡಿಯಾರದಂತೆ ದಿನದ 24 ಗಂಟೆಯೂ ಶಿವಕುಮಾರ ಶ್ರೀಗಳು ತಮ್ಮ ಬದುಕು ಸವೆಸಿ ಗಂಧದ ಕೊರಡಿನಂತೆ ಸಮಾಜಕ್ಕೆ ಅಪೂರ್ವ ಸೇವೆ ಸಲ್ಲಿಸಿದ್ದಾರೆ ಎಂದರು.

ಶ್ರೀಗಳು ಮಠದ ಅಧಿಪತಿಯಾಗಿ, ಸಂಪ್ರದಾಯ, ಪರಂಪರೆ, ಆಧುನಿಕತೆ ಎಲ್ಲವನ್ನು ಏಕಕಾಲದಲ್ಲಿ ಮೈಗೂಡಿಸಿಕೊಂಡಿದ್ದರು. ದೇಶದಲ್ಲಿ ಸದಾ ಕಾಲ ಕಲ್ಯಾಣವಾಗಬೇಕು ಎಂದು ಸದಾ ಬಯಸುತ್ತಿದ್ದರು ಎಂದರು.

ಸಮಾಜದಲ್ಲಿ ಪ್ರತಿಯೊಬ್ಬರೂ ಸಂತೋಷದಿಂದ ಬದುಕಬೇಕು ಎಂಬ ಆಶಯ ಶ್ರೀಗಳದ್ದಾಗಿತ್ತು ಎಂದು ಅವರು ಹೇಳಿದರು.

ಶ್ರೀಗಳು ಇಂದು ಭೌತಿಕವಾಗಿ ಮರೆಯಾಗಿದ್ದರೂ ಸಹ ನಮ್ಮೊಂದಿಗೆ ಇಲ್ಲ ಎಂಬ ಭಾವನೆ ವ್ಯಕ್ತವಾಗುತ್ತಿಲ್ಲ ಎಂದರು.

ಶ್ರೀಮಠದ ಅಧ್ಯಕ್ಷರಾಗಿರುವ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಹಿರಿಯ ಶ್ರೀಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲೇ ಮುನ್ನಡೆಯುತ್ತಿದ್ದು, ಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.

ಬೇಲಿಮಠದ  ಶ್ರೀ ಶಿವರುದ್ರ ಸ್ವಾಮೀಜಿ ಮಾತನಾಡಿ, ಶಿವಕುಮಾರ ಶ್ರೀಗಳು ಪರಿಪೂರ್ಣವಾದ ಬದುಕಿಗೆ ಬೆಳಕು ತಂದುಕೊಟ್ಟವರು. ಮಠದ ಹೊಣೆ ಹೊತ್ತಿರುವ ಸಿದ್ದಲಿಂಗ ಸ್ವಾಮೀಜಿಯವರನ್ನು ಶಿಷ್ಯನ ರೂಪದಲ್ಲಿ ಶ್ರೀಗಳು ಇಲ್ಲಿ ಬಿಟ್ಟು ಹೋಗಿದ್ದಾರೆ. ಶ್ರೀಮಠವು 12ನೇ ಶತಮಾನದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದೆ ಎಂದರು.

ಶ್ರೀಗಳು ಶ್ರೀಕ್ಷೇತ್ರವನ್ನು ಶರಣ ಸಂಗಮ ಕ್ಷೇತ್ರವನ್ನಾಗಿ ಮಾಡಿದ್ದಾರೆ ಎಂದು ಅವರು ಹೇಳಿದರು.
ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಮಾತನಾಡಿ, ಕೈಲಾಸ ದೊಡ್ಡದಲ್ಲ ಕಾಯಕ ದೊಡ್ಡದು ಎಂಬುದನ್ನು ತಮ್ಮ ನಿಸ್ವಾರ್ಥ ಸೇವಾ ಕೈಂಕರ್ಯದ  ಮೂಲಕ ತೋರಿಸಿಕೊಟ್ಟಿರುವ ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಇಡೀ ಜಗತ್ತಿಗೆ ದಾರಿದೀಪವಾಗಿದ್ದಾರೆ ಎಂದು  ಹೇಳಿದರು.

ಶ್ರೀಗಳು ಮಕ್ಕಳಿಗೆ ತಾಯಿಯಾಗಿ, ಶಿಕ್ಷಕನಾಗಿ ದೇಶದ ಹಾಗೂ ರಾಜ್ಯದ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದರು. ಮಠದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ದೇಶದ ಮೂಲೆ ಮೂಲೆಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ ಎಂದರು.

ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಎಲ್ಲರೂ ಒಗ್ಗಟ್ಟಾಗಿ ಶ್ರೀಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಕಾಯಕವನ್ನು ಮಾಡುವುದಾಗಿ ಅವರು ಇದೇ ಸಂದರ್ಭದಲ್ಲಿ ಸಂಕಲ್ಪ ಮಾಡಿದರು.

ವಸತಿ ಸಚಿವ ವಿ. ಸೋಮಣ್ಣ ಮಾತನಾಡಿ, ಶ್ರೀಗಳು ಕಾಯಕ, ದಾಸೋಹ ತತ್ವದಡಿಯಲ್ಲಿ ಜಂಗಮ ದೇವರಾಗಿದ್ದಾರೆ.  127ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು  ಪ್ರಾರಂಭಿಸಿ ಶ್ರೀಕ್ಷೇತ್ರವನ್ನು ಜ್ಞಾನ ಬೆಳಕಿನ ಕ್ಷೇತ್ರವನ್ನಾಗಿ ರೂಪಿಸಿದರು ಎಂದರು.

ಮುಂದಿನ ತಿಂಗಳು ಬೆಂಗಳೂರಿನಲ್ಲಿ 14 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಬಸವರಾಜ ಹೊರಟ್ಟಿ, ಎಸ್.ಟಿ. ಸೋಮಶೇಖರ್, ಜಿ.ಎಸ್. ಬಸವರಾಜು,  ಮೇಯರ್ ಲಲಿತಾ ರವೀಶ್, ಶಾಸಕ ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್, ಎಸ್ಪಿ ಡಾ. ಕೆ. ವಂಶಿಕೃಷ್ಣ, ಡಾ. ಪರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಉದ್ಯಮಿಗಳಾದ ಮುಖೇಶ್ ಗರ್ಗ್, ಮಣೀಂದರ್ ಜೀತ್ ಸಿಂಗ್ ಬಿಟ್ಟ, ಅಂಗಾಂಗ ತಜ್ಞರಾದ ಡಾ. ರವೀಶ್ ಅವರನ್ನು ಸನ್ಮಾನಿಸಲಾಯಿತು.

Leave a Comment