ಸಮಸ್ಯೆ ಪರಿಹಾರಕ್ಕೆ ಒಳ್ಳೆ ಸಮಯ

ಜೂನ್ ಸಂತಾನಹೀನತೆ ಜಾಗೃತಿಮಾಸ

ಜೂನ್ ತಿಂಗಳನ್ನು ರಾಷ್ಟ್ರೀಯ ಸಂತಾನಹೀನತೆ ಜಾಗೃತಿಮಾಸ ಎಂದು ಪರಿಗಣಿಸಲಾಗಿದೆ. ಪುರುಷರಲ್ಲಿ ಸಂತಾನಹೀನತೆ ಸಮಸ್ಯೆ ಪ್ರಮಾಣ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಇದೇ ವಿಷಯದ ಕುರಿತು ಈ ಬಾರಿ ಚರ್ಚೆ ನಡೆದಿದೆ. ಪುರುಷರ ಸಂತಾನಹೀನತೆಯ ಸಮಸ್ಯೆಯಲ್ಲಿ ಬಹುಮುಖ್ಯ ಪಾತ್ರವಹಿಸುವ ಅಂಶಗಳನ್ನು, ಅದನ್ನು ತಡೆಯಬಹುದಾದ ದಾರಿಗಳನ್ನು ಹಲವು ಅಧ್ಯಯನದ ಮೂಲಕ ಕಂಡುಕೊಳ್ಳಲಾಗಿದೆ. ಈ ಸಮಸ್ಯೆಯನ್ನು ಸೂಕ್ಷ್ಮವಾಗಿ, ಅಷ್ಟೇ ಪರಿಣಾಮಕಾರಿಯಾಗಿ ವಿಮರ್ಶಿಸಲಾಗಿದೆ. ಕೆಲವು ಅಧ್ಯಯನ ವಿಶ್ಲೇಷಣೆ ಹಾಗೂ ಸಂಶೋಧನೆಗಳಿಂದ, ಪುರುಷ ಸಂತಾನಹೀನತೆಗೆ ಸಂಬಂಧಿಸಿದಂತೆ ಕೆಲವು ಮುಖ್ಯ ಅಂಶಗಳನ್ನು ಈ ಜಾಗೃತಿ ಮಾಸದಲ್ಲಿ ಎತ್ತಿಹಿಡಿಯಲಾಗಿದೆ. ಅವೇನೆಂದರೆ, ಪುರುಷರ ಸಂತಾನಹೀನತೆಯ ಸಮಸ್ಯೆಯನ್ನು ತಡೆಗಟ್ಟಲು ಸಾಧ್ಯವಿದೆ.

ವೀರ್ಯದ ಸಮಸ್ಯೆ ಸಂತಾನಹೀನತೆ ಸಮಸ್ಯೆಯಷ್ಟೇ ಆಗಿರುವುದಿಲ್ಲ. ವೀರ್ಯಾಣುವಿನ ಕುಂಠಿತ ಸಂಖ್ಯೆ ಅಥವಾ ಅದರ ಕ್ಷೀಣಿಸಿದ ಗುಣಮಟ್ಟ ಒಟ್ಟಾರೆ ದೈಹಿಕ ಆರೋಗ್ಯದ ಸಮಸ್ಯೆಗಳನ್ನೂ ಬಿಂಬಿಸುತ್ತದೆ.

ಶೀಘ್ರ ಪರೀಕ್ಷೆ ಮುಂಬರುವ ಸಮಸ್ಯೆಯನ್ನು ತಪ್ಪಿಸುತ್ತದೆ ಮಾತ್ರವಲ್ಲ, ಗಂಭೀರ ಪರಿಣಾಮಗಳನ್ನು ತಡೆಯುತ್ತದೆ. ಭಾರತ ಸರ್ಕಾರದ ಮಹಿಳಾ ಸಶಕ್ತೀಕರಣ ಯೋಜನೆ-ಮಹಿಳಾ ಸಬಲೀಕರಣದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು,ಸಂತಾನಹೀನತೆ ಸಮಸ್ಯೆ ಎಂದಾಕ್ಷಣ ಮಹಿಳೆಯೇ ಏಕೆ ಮೊದಲು ಪರೀಕ್ಷಿಸಿಕೊಳ್ಳಬೇಕು ಎಂಬ ಪ್ರಶ್ನೆಯನ್ನು ಎತ್ತಿದೆ. ಪುರುಷರೂ ಈ ವಿಷಯದಲ್ಲಿ ಸ್ವಯಂಪ್ರೇರಿತರಾಗಿ ಪರೀಕ್ಷೆಗೆ ಒಳಗಾಗಬೇಕು ಎಂದೂ ಹೇಳಿದೆ.

ಪುರುಷರಲ್ಲಿ ಏಕೆ ಹೆಚ್ಚುತ್ತಿದೆ ಸಮಸ್ಯೆ

ಭಾರತ, ಉತ್ತರ ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಯುರೋಪ್ ಒಳಗೊಂಡಂತೆ ಹಲವು ದೇಶಗಳಲ್ಲಿ ಪುರುಷರಲ್ಲಿನ ವೀರ್ಯಾಣುವಿನ ಸಂಖ್ಯೆಯು ಕೆಲವೇ ವರ್ಷಗಳಿಂದೀಚೆಗೆ ಗಣನೀಯವಾಗಿ ಇಳಿಕೆಯಾಗಿದೆ ಎಂಬ ಅಂಶವನ್ನು ಇತ್ತೀಚಿನ ಸಂಶೋಧನೆಯೊಂದು ಹೊರಹಾಕಿದೆ. ಈ ಸಂಶೋಧನೆ ಪ್ರಕಾರ, ೪೦ ವರ್ಷಕ್ಕೂ ಕಡಿಮೆ ಅವಧಿಯಲ್ಲಿ, ಪುರುಷರ ವೀರ?ಯದ ಸಂಖ್ಯೆಯಲ್ಲಿ ಶೇ ೫೦ರಷ್ಟು ಇಳಿಮುಖವಾಗಿದೆ. ಸದ್ಯಕ್ಕೆ ವೀರ್ಯಾಣುವಿನ ಸಂಖ್ಯೆಯೇ ಪುರುಷರ ಸಂತಾನಶಕ್ತಿಯ ಪರಿಣಾಮಕಾರಿ ಮಾಪಕವಾಗಿ ಬಳಕೆಯಾಗುತ್ತಿದೆ.

ಹ್ಯೂಮನ್ ರಿಪ್ರೊಡಕ್ಷನ್ ಅಪ್‌ಡೇಟ್ ನಿಯತಕಾಲಿಕೆಯಲ್ಲಿ ಪ್ರಕಟಗೊಂಡ ಹೊಸ ಅಧ್ಯಯನವು, ಪುರುಷನ ವೀರ್ಯಾಣುವಿನ ಸಂಖ್ಯೆ ಕ್ಷೀಣಿಸುತ್ತಿದೆ ಎಂಬುದನ್ನು ತೋರಿಸುವುಷ್ಟೇ ಅಲ್ಲ, ಈ ಪ್ರಕ್ರಿಯೆ ನಿರಂತರವಾಗಿ ಮುಂದುವರೆದರೆ, ಮುಂದೆ ಸರಿದೂಗಿಸಲು ಸಾಧ್ಯವೇ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದೂ ಎಚ್ಚರಿಸಿದೆ.  ೧೯೭೩ರಿಂದ ೨೦೧೧ರವರೆಗೂ, ಹಲವು ದೇಶಗಳ ಪುರುಷರಲ್ಲಿ ವೀರ್ಯದ ಚಲನಶಕ್ತಿ ಹಾಗೂ ವೀರ್ಯಾಣುವಿನ ಸಂಖ್ಯೆ ಇವೆರಡೂ ಶೇ ೫೦ಕ್ಕೂ ಹೆಚ್ಚು ಪ್ರಮಾಣದಲ್ಲಿ ಕುಂಠಿತಗೊಂಡಿರುವುದನ್ನು ದಾಖಲಿಸಿದೆ.  ೧೯೯೫ರ ನಂತರದ ಅಧ್ಯಯನಗಳನ್ನೂ ಸಂಶೋಧಕರು ವಿಶ್ಲೇಷಣೆ ನಡೆಸಿದ್ದಾರೆ. ಹೀಗಿದ್ದರೂ ಇದೇ ಸ್ಥಿತಿ ಮುಂದುವರೆದಿರುವುದು ಕಂಡುಬಂದಿದೆ.

ವೀರ್ಯದ ಗುಣಮಟ್ಟ: ಆರೋಗ್ಯದ ಮೇಲೆ ಪರಿಣಾಮಕಾರಿ ಹೇಗೆ?

ವೀರ್ಯದ ಗುಣಮಟ್ಟವು ಒಬ್ಬ ಪುರುಷನ ಒಟ್ಟಾರೆ ದೈಹಿಕ ಆರೋಗ್ಯವನ್ನು ಬಿಂಬಿಸುತ್ತದೆ. ವೀರ್ಯದ ಗುಣಮಟ್ಟದ ಮೇಲೆ ಪುರುಷನ ಸಂತಾನಶಕ್ತಿಯ ಕಾರ್ಯನಿರ್ವಹಣೆಯು ಅವಲಂಬಿತವಾಗಿರುವ ಅಂಶಗಳನ್ನು ಹಲವು ಅಧ್ಯಯನಗಳಿಂದ ಕಂಡುಕೊಳ್ಳಲಾಗಿದೆ.

ಇದೇ ನಿಟ್ಟಿನಲ್ಲಿ ಮುಖ್ಯ ಅಧ್ಯಯನವೊಂದನ್ನು ಆರಿಸಲಾಗಿದೆ. ಇಟಲಿಯಲ್ಲಿ ೫,೧೭೭ ಪುರುಷರ ಸಂತಾನಹೀನತೆ ಸಮಸ್ಯೆ ಕುರಿತು ನಡೆಸಿದ ಈ ಅಧ್ಯಯನದಲ್ಲಿ ಸಂಶೋಧಕ ಆಲ್ಬರಟೊ ಫರಲಿನ್ ಕೆಲವು ಅಂಶಗಳನ್ನು ನೀಡಿದ್ದಾರೆ.

ವೀರ್ಯಾಣುವಿನ ಸಂಖ್ಯೆಯಲ್ಲಿ ಇಳಿಕೆಯಾಗುವುದಕ್ಕೂ ಚಯಾಪಚಯದಲ್ಲಿನ ಬದಲಾವಣೆಗಳು, ಹೃದಯದ ಸಮಸ್ಯೆ, ಮೂಳೆಯ ಸಾಂದ್ರತೆ ಕ್ಷೀಣಿಸುವುದಕ್ಕೂ ಸಂಬಂಧವಿರುತ್ತದೆ ಎಂಬುದರ ಮೇಲೆ ಈ ಅಧ್ಯಯನ ಬೆಳಕು ಚೆಲ್ಲಿದೆ. ಸಂತಾನಹೀನತೆ ಸಮಸ್ಯೆ ಇರುವ ಪುರುಷರಲ್ಲಿ ದೇಹದ ಆರೋಗ್ಯದಲ್ಲೂ ಬದಲಾವಣೆ ಕಂಡುಬಂದು ಈ ಬದಲಾವಣೆಗಳು ಜೀವನದ ಗುಣಮಟ್ಟವನ್ನೂ ಕಸಿಯುತ್ತದೆ ಎಂದು ತಿಳಿಸಿದೆ.

ಈ ಅಧ್ಯಯನದ ಕೆಲವು ಫಲಿತಾಂಶಗಳು ಹೀಗಿವೆ:

ಪ್ರಸ್ತುತ ಸಾಕಷ್ಟು ಪುರುಷರಲ್ಲಿ ವೀರ್ಯಾಣುವಿನ ಸಂಖ್ಯೆ ಕಡಿಮೆ ಇರುತ್ತದೆ. ಸಹಜ ವೀರ್ಯಾಣುವನ್ನು ಹೊಂದಿರುವ ಪುರುಷರಿಗಿಂತ ಬೊಜ್ಜು ಹೆಚ್ಚುವ ಸಾಧ್ಯತೆಯು ಇವರಲ್ಲಿ ೧೦೨ರಷ್ಟು ಪಟ್ಟು ಹೆಚ್ಚಿರುತ್ತದೆ. ಇದರೊಂದಿಗೆ ರಕ್ತದ ಏರೊತ್ತಡ ಬರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ಚಯಾಪಚಯದಲ್ಲಿನ ವ್ಯವಸ್ಥೆಯ ಮೇಲೂ ವೀರ್ಯಾಣುವಿನ ಸಂಖ್ಯೆಯು ಪರಿಣಾಮ ಬೀರುತ್ತದೆ. ಇದು ಮಧುಮೇಹ, ಹೃದಯದ ತೊಂದರೆ ಹಾಗೂ ಪಾರ್ಶವಾಯುವಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ವೀರ್ಯಾಣುವಿನ ಸಂಖ್ಯೆ ಕಡಿಮೆ ಇರುವವರಲ್ಲಿ ಇನ್ಸುಲಿನ್ ಪ್ರತಿರೋಧಕ ‘ಮೆಟಬಾಲಿಕ್ ಸಿಂಡ್ರೋಮ್ ಉಂಟಾಗುತ್ತದೆ. ಇದು ಮಧುಮೇಹಕ್ಕೆ ಎಡೆಮಾಡಿಕೊಡುತ್ತದೆ.

ಒಮ್ಮೆ ಸ್ಖಲನಗೊಂಡ ವೀರ?ಯದಲ್ಲಿ ೨.೯ ಕೋಟಿಗೂ ಕಡಿಮೆ ವೀರ್ಯಾಣು ಇದ್ದರೆ ಅದನ್ನು ’ಕಡಿಮೆ’ ಎಂದು ಪರಿಗಣಿಸಲಾಗುತ್ತದೆ. ಇದು ವಿಶ್ವ ಆರೋಗ್ಯ ಸಂಸ್ಥೆಯ ಮಾಪಕ ಕೂಡ.

ಈ ಅಧ್ಯಯನಕ್ಕೆ ಒಳಗಾಗಿದ್ದ ಪುರುಷರ ವೀರ್ಯವನ್ನು ಫರ?ಟಿಲಿಟಿ ಕ್ಲಿನಿಕ್‌ನಲ್ಲಿ ವಿಶ್ಲೇಷಣೆ ಮಾಡಲಾಗಿದೆ. ವೀರ್ಯಾಣುವಿನ ಸಂಖ್ಯೆಯು ಕಡಿಮೆ ಇದ್ದವರಲ್ಲಿ ಟೆಸ್ಟೊಸ್ಟೆರೋನ್ ಮಟ್ಟವು ಕಡಿಮೆಯಾಗುವ ಸಾಧ್ಯತೆಯು ೧೨ ಪಟ್ಟು ಹೆಚ್ಚುರುವುದು ಕಂಡುಬಂದಿದೆ. ಈ ರೀತಿ ಕಡಿಮೆ ಟೆಸ್ಟೊಸ್ಟೆರೋನ್ ಇದ್ದ ಅರ್ಧದಷ್ಟು ಪುರುಷರಲ್ಲಿ ಮೂಳೆಯಲ್ಲಿನ ಸಾಂದ್ರತೆ ಕಡಿಮೆಯಾಗುವುದು ಕಂಡುಬಂದಿದೆ.

ಕಡಿಮೆ ವೀರ್ಯಾಣುವಿನ ಸಂಖ್ಯೆ ಹೃದಯ ಸಂಬಂಧಿ ಸಮಸ್ಯೆಗಳಿಗೆ ದಾರಿಮಾಡಿಕೊಡುವ ಸಾಧ್ಯತೆ ಇದೆ. ಆದ್ದರಿಂದ ವೀರ್ಯದ ಗುಣಮಟ್ಟ ಆರೋಗ್ಯಕ್ಕೆ ಕನ್ನಡಿ ಇದ್ದಂತೆ ಎಂದು ಎಚ್ಚರಿಸಿದ್ದಾರೆ.

ಪುರುಷರ ಸಂತಾನಹೀನತೆ ಸಮಸ್ಯೆಗೆ ಗರ್ಭಧಾರಣೆಯ ದೃಷ್ಟಿಯಿಂದ ಮಾತ್ರ ಚಿಕಿತ್ಸೆ ನೀಡುವುದಲ್ಲದೇ, ಅತಿಯಾದ ತೂಕ, ರಕ್ತದೊತ್ತಡದಂಥ ಸಮಸ್ಯೆಗಳ ದೃಷ್ಟಿಯಿಂದಲೂ ಚಿಕಿತ್ಸೆಯನ್ನು ನೀಡಬೇಕಿದೆ.

Leave a Comment