ಸಮರ್ಪಕ ದಾಖಲೆ ಇಲ್ಲದ ವಾಹನಗಳ ವಿರುದ್ಧ ಕ್ರಮ: ರಘು

ಕೊರಟಗೆರೆ,  ಸೆ. ೧೪- ಪ್ರಾದೇಶಿಕ ಸಾರಿಗೆ ಇಲಾಖೆ ಜನರ ಸುರಕ್ಷತೆಗೆ ಹಾಗೂ ವಾಹನ ನಿಯಮಕ್ಕೆ ಬದ್ದವಾಗಿದ್ದು, ಸಾರ್ವಜನಿಕರ ಸೇವೆಗೆ ಸದಾ ಸಿದ್ದ ಎಂದು ಮಧುಗಿರಿ ಎ.ಆರ್.ಟಿ.ಒ ಕಛೇರಿಯ ಇನ್ಸ್‌ಪೆಕ್ಟರ್ ರಘು ಹೇಳಿದರು.

ತಾಲ್ಲೂಕಿನ ವಾಹನಗಳ ಪರವಾನಗಿ ಹಾಗೂ ತಪಾಸಣೆ ಹಾಗೂ ಅರಿವು ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಮಧುಗಿರಿ ವಿಭಾಗಕ್ಕೆ ನೂತನವಾಗಿ ಆಗಮಿಸಿದ್ದ ಇವರನ್ನು ಮುಖಂಡರು ಸ್ವಾಗತಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಕರ್ನಾಟಕ ರಸ್ತೆ ಸಾರಿಗೆ ಪ್ರಾದೇಶಿಕ ಇಲಾಖೆಯು ಜನರ ಸುರಕ್ಷೆ ಹಾಗೂ ವಾಹನಗಳ ನಿಯಮಕ್ಕೆ ಬದ್ದವಾಗಿದೆ. ಜನರಿಗೆ ಸೇವೆ ನೀಡಲು ಇಲಾಖೆಯು ಸದಾ ಸಿದ್ದವಿದ್ದು, ವಾಹನಗಳ ಸ್ಥಿತಿ ಹಾಗೂ ಗುಣಮಟ್ಟದ ನಿಯಮಗಳಿಗೆ ಯಾವುದೇ ತರಹದ ರಾಜಿ ಇಲ್ಲ. ವಾಹನದ ನಿಯಮವನ್ನು ಉಲ್ಲಂಘಿಸಿದವರಿಗೆ ಹಾಗೂ ವಾಹನಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳದಿದ್ದಲ್ಲಿ ಮತ್ತು ಅಗತ್ಯವಾದ ನಿಯಮ ಪ್ರಕಾರ ದಾಖಲೆಗಳನ್ನು ಹೊಂದದೆ ಇದ್ದಲ್ಲಿ ಅಂತಹ ವಾಹನಗಳ ಮೇಲೆ ಮತ್ತು ಮಾಲೀಕರ ಮೇಲೆ ಕಾನೂನಿನಡಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಹಾಗೂ ವಾಹನ ಪರವಾನಗಿ ಇಲ್ಲದೆ ಚಾಲನೆ ಮಾಡುವ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸುವುದರೊಂದಿಗೆ ಚಾಲನೆ ಮಾಡುತ್ತಿರುವ ವಾಹನವು ಮುಟ್ಟುಗೊಲು ಹಾಕಿಕೊಳ್ಳಲಾಗುವುದು. ಇದರೊಂದಿಗೆ ವಾಹನಗಳ ದಾಖಲೆಗೆ ಹಾಗೂ ತಿದ್ದುಪಡಿಗಳಿಗೆ ಇಲಾಖೆಗೆ ಬರುವ ವಾಹನ ಮಾಲೀಕರಿಗೆ ಹಾಗೂ ಚಾಲಕರಿಗೆ ಕಾನೂನಿನ ನಿಯಮದಂತೆ ಶೀಘ್ರವಾಗಿ ಕೆಲಸ ಮಾಡಿಕೊಡಲಾಗುವುದು ಎಂದರು. ಮಾಜಿ ಪ.ಪಂ.ಸದಸ್ಯ ಪವನ್‍ಕುಮಾರ್ ಮಾತನಾಡಿ, ಪ್ರಾದೇಶಿಕ ಸಾರಿಗೆ ಇಲಾಖೆಯು ಜನರೊಂದಿಗೆ ಉತ್ತಮ ಸಂಬಂಧ ಹೊಂದಿದೆ. ಇಲಾಖೆಯಲ್ಲಿ ಜನರಿಗೆ ಹಾಗೂ ವಾಹನ ಮಾಲೀಕರಿಗೆ ಕರ್ತವ್ಯ ನಿಷ್ಠ ಅಧಿಕಾರಿಗಳು ದೊರೆತರೆ ಬಹುತೇಕ ವಾಹನಗಳ ಸಮಸ್ಯೆಗಳು ಬಗೆಹರಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಇಲಾಖೆಯು ಸಾರ್ವಜನಿಕರೊಂದಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ ಎಂದರು.

ಈ ಸಂದರ್ಭದಲ್ಲಿ ವಿಎಸ್‍ಎಸ್‍ಎನ್ ಸದಸ್ಯ ರುದ್ರಪ್ರಸಾದ್, ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ. ಪುರುಷೋತ್ತಮ್, ಪ.ಪಂ. ಸದಸ್ಯ ಪ್ರದೀಪ್‍ಕುಮಾರ್, ಮುಖಂಡರುಗಳಾದ ಎ.ಬಿ, ರಘು, ಮಕ್ತಿಯಾರ್, ಜಗನ್ನಾಥ್, ಅಬ್ದಲ್‍ಸತ್ತಾರ್, ವಜೀರ್‍ಸಾಬ್, ಜಮೀರ್, ಅನ್ಸರ್ ಮತ್ತಿತರರು ಉಪಸ್ಥಿತರಿದ್ದರು.

Leave a Comment