ಸಮರ್ಪಕ ಆರ್ಥಿಕ ವ್ಯವಸ್ಥೆ ನಿರ್ವಹಣೆ ಅಗತ್ಯ- ಎನ್.ಮಹೇಶ್

ಮೈಸೂರು,ಸೆ.23:- ಆರ್ಥಿಕ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿದ್ದರೆ ಇಡೀ ದೇಶವೇ ಹಾಳಾಗಲಿದೆ. ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದಾರೆ ಎಂದು ಶಾಸಕ ಎನ್.ಮಹೇಶ್ ಆರೋಪಿಸಿದರು.
ನಿನ್ನೆ ಮಾನಸಗಂಗೋತ್ರಿ ಮಾನವಿಕ ಸಭಾಂಗಣದಲ್ಲಿ ಬಹುಜನ ವಿದ್ಯಾರ್ಥಿ ಸಂಘ(ಬಿವಿಎಸ್)ದ ವತಿಯಿಂದ ಏರ್ಪಡಿಸಿದ್ದ ‘ಭಾರತದ ಆರ್ಥಿಕ ಹಿಂಜರಿತ ಕಾರಣ-ಪರಿಣಾಮ-ಪರಿಹಾರ’ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದರು. ಇಡೀ ದೇಶ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದು, ಕೇಂದ್ರ ಸರ್ಕಾರ ಮಾತ್ರ ಜನರ ಗಮನವನ್ನು ಬೇರೆ ಕಡೆಗೆ ಸೆಳೆದು ದಿಕ್ಕು ತಪ್ಪಿಸುತ್ತಿದೆ. ಆರ್ಥಿಕ ಹಿಂಜರಿತದಿಂದ ಕೇಂದ್ರದ ವಿರುದ್ಧ ಜನಾಕ್ರೋಶ ಮಡುಗಟ್ಟಿದೆ. ಇದರಿಂದ ತಪ್ಪಿಸಿಕೊಳ್ಳಲು ಗೃಹ ಸಚಿವ ಅಮಿತ್ ಷಾ ‘ಹಿಂದಿಯನ್ನು ರಾಷ್ಟ್ರೀಯ ಭಾಷೆ ಮಾಡಬೇಕು’ ಎಂದು ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಬರೀ ಭಾವನಾತ್ಮಕ ವಿಚಾರವನ್ನೇ ಕೆದಕಿ ಇಡೀ ಸಮಾಜವನ್ನು ಮರುಳು ಮಾಡಲು ಯತ್ನಿಸಲಾಗುತ್ತಿದೆ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ಕೃಷಿ ಕ್ಷೇತ್ರವನ್ನು ಕಡೆಗಣಿಸಿದೆ. ಸಂಕಷ್ಟಕ್ಕೆ ಸಿಲುಕಿರುವ ಈ ಕ್ಷೇತ್ರದಿಂದ ಬರುವ ಆದಾಯ ಕಡಿಮೆಯಾಗಿದೆ. ಜತೆಗೆ, ಶೇ.50ರಷ್ಟು ಕೃಷಿಕರು, ಕಾರ್ಮಿಕರು ಕೈಗಾರಿಕಾ ಕ್ಷೇತ್ರದಿಂದ ಸೇವಾ ವಲಯದತ್ತ ಮುಖ ಮಾಡಿದ್ದಾರೆ. ಇದರಿಂದ ಜಿಡಿಪಿಗೆ ಶೇ.26ರಷ್ಟು ಆದಾಯ ನಷ್ಟವಾಗಿದೆ. ಇದು ದೇಶದ ಆರ್ಥಿಕತೆಗೆ ಪ್ರತಿಕೂಲವಾಗಿದೆ ಎಂದು ವಿಶ್ಲೇಷಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ನವಿತಾ ತಿಮ್ಮಯ್ಯ, ಬಿವಿಎಸ್‌ನ ಅಧ್ಯಕ್ಷ ಎಚ್.ಎಸ್.ಗಣೇಶಮೂರ್ತಿ, ರಿಪಬ್ಲಿಕ್ ಚೇಂಬರ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಮನೋಜ್ ಗೌತಮ್, ಪ್ರಜಾ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಸೋಸಲೆ ಸಿದ್ದರಾಜು ಮತ್ತಿತರರು ಉಪಸ್ಥಿತರಿದ್ದರು.

Leave a Comment