ಸಮನ್ವಯ ಸಮಿತಿ ಸಭೆಯತ್ತ ಎಲ್ಲರ ಚಿತ್ತ

ಬೆಂಗಳೂರು, ಡಿ. ೫- ಜೆಡಿಎಸ್-ಕಾಂಗ್ರೆಸ್ ಮೈತ್ರಿಸರ್ಕಾರದ ಸಮನ್ವಯ ಸಮಿತಿ ಇಂದು ಸಂಜೆ ನಡೆಯಲಿದ್ದು, ಬಹು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಯಲಿದೆ ಎಂಬ ನಿರೀಕ್ಷೆ ಇದ್ದರೂ ವಿಸ್ತರಣೆಗೆ ಮುಹೂರ್ತ ನಿಗದಿಯಾಗುವುದೇ ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಈ ಸಭೆ ನಡೆಯಲಿದೆಯಾದರೂ ದೋಸ್ತಿ ಪಕ್ಷಗಳ ನಡುವೆ ವಿಸ್ತರಣೆ ಕುರಿತು ವಿಭಿನ್ನ ಧೋರಣೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ವಿಸ್ತರಣೆಯಾಗಲಿದೆಯೇ ಅಥವಾ ಮುಂದಕ್ಕೆ ಹೋಗಲಿದೆಯೇ ಎಂಬುದು ಸಚಿವ ಸ್ಥಾನದ ಆಕಾಂಕ್ಷಿಗಳನ್ನು ತುದಿಗಾಲ ಮೇಲೆ ನಿಲ್ಲಿಸಿದೆ.

ಕಾಂಗ್ರೆಸ್‌ ಪಾಲಿನ 6 ಮತ್ತು ಜೆಡಿಎಸ್ ಪಾಲಿನ 2 ಸಚಿವ ಸ್ಥಾನಗಳು ಲಭಿಸಲಿದ್ದು, ವಿಸ್ತರಣೆ ಜತೆಗೆ ನಿಗಮ ಮಂಡಳಿಗಳ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ, ರಾಜಕೀಯ ಕಾರ್ಯದರ್ಶಿಗಳ ನೇಮಕಾತಿ ಒಟ್ಟಿಗೆ ಆಗಬೇಕು ಎಂಬ ಪ್ರಬಲ ಒತ್ತಾಯ ಉಭಯ ಬಣಗಳಲ್ಲೂ ಕೇಳಿ ಬರುತ್ತಿದೆ.

ಮೂರು ತಿಂಗಳ ನಂತರ ಸಮನ್ವಯ ಸಮಿತಿ ಸಭೆ ನಡೆಯುತ್ತಿದ್ದು, ಅತ್ಯಂತ ಮಹತ್ವದ ಸಭೆಯಾಗಿ ಪರಿಣಮಿಸಿದೆ. ಸರ್ಕಾರದ ಸ್ಥಿರತೆಯೊಂದಿಗೆ ತಳುಕು ಹಾಕಿಕೊಂಡಿರುವ ಸಂಪುಟ ವಿಸ್ತರಣೆ ಕಗ್ಗಟ್ಟನ್ನು ಬಿಡಿಸುವುದು ಉಭಯ ಪಕ್ಷಗಳ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.

ಈ ನಡುವೆ ಕಾಂಗ್ರೆಸ್‌ನ 6 ಸಚಿವ ಸ್ಥಾನಗಳಿಗೆ ಆಕಾಂಕ್ಷಿಗಳ ಪಟ್ಟಿ ಬಹಳ ದೊಡ್ಡದಾಗಿದ್ದು, ಜೆಡಿಎಸ್‌ನಲ್ಲೂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಆದರೆ, ಸಚಿವಾಕಾಂಕ್ಷಿಗಳು ವಿಸ್ತರಣೆ ಬೆಳಗಾವಿ ಅಧಿವೇಶನಕ್ಕೆ ಮುನ್ನವೇ ನಡೆಯಬೇಕು ಎಂದು ಪಟ್ಟು ಹಿಡಿದಿದ್ದರೆ, ಕಾಂಗ್ರೆಸ್‌ನ ಮತ್ತೊಂದು ಬಣ ವಿಸ್ತರಣೆಯನ್ನು ಲೋಕಸಭೆ ಚುನಾವಣೆವರೆಗೂ ಮುಂದೂಡಬೇಕು ಎಂಬ ಪ್ರಯತ್ನವನ್ನು ತೆರೆಮರೆಯಲ್ಲಿ ಮಾಡುತ್ತದೆ.

ಜೆಡಿಎಸ್‌ನ ದಬ್ಬಾಳಿಕೆ ಹೆಚ್ಚಾಗುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷದ ಒಂದು ಬಣ ಏನಾದರೂ ಮಾಡಿ ಸಂಪುಟ ವಿಸ್ತರಣೆ ಮಾಡಬೇಕು, ಜೆಡಿಎಸ್‌ನ ವೇಗಕ್ಕೆ ಕಡಿವಾಣ ಹಾಕಬೇಕು ಎಂಬ ಒತ್ತಾಯವನ್ನು ಪಕ್ಷದ ಮುಖಂಡರ ಮುಂದಿಟ್ಟಿದೆ.

ಸಂಪುಟ ವಿಸ್ತರಣೆ ಮಾಡುವುದಾದರೆ ಅದರೊಟ್ಟಿಗೆ ನಿಗಮ ಮಂಡಳಿಗಳಿಗೂ ನೇಮಕ ಮಾಡಬೇಕು, ಇದಕ್ಕೆ ಸಂಬಂಧಿಸಿದ ಪಟ್ಟಿಯನ್ನು ಸಿದ್ಧಪಡಿಸಿ ದೆಹಲಿಗೆ ಬರುವಂತೆ ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಸ್ಪಷ್ಟ ಸೂಚನೆ ನೀಡಿದೆ.

ಜೆಡಿಎಸ್ ಪಾಲಿನ 2 ಸಚಿವಸ್ಥಾನಗಳಿಗೆ ಭಾರಿ ಲಾಬಿ ನಡೆಯುತ್ತಿದ್ದು, ಆ ಪಕ್ಷದ ನಾಯಕರಿಗೂ ಇದು ತಲೆಬಿಸಿ ಉಂಟು ಮಾಡಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಸಮ್ಮತಿಯೊಂದಿಗೆ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯನ್ನು ಸಿದ್ಧಪ‌ಡಿಸುವ ಮಹತ್ವದ ಚರ್ಚೆ ಇಂದಿನ ಸಭೆಯಲ್ಲಿ ನಡೆಯಲಿದ್ದು, ಇದರ ಫಲಿತಾಂಶ ಕುರಿತಂತೆ ತೀವ್ರ ಕುತೂಹಲ ಉಂಟುಮಾಡಿದೆ.

Leave a Comment