ಸಭೆ ಕರೆಯಲು ಸಿಎಂಗೆ ಡಿವಿಎಸ್ ಮನವಿ

ಬೆಂಗಳೂರು, ಜೂ. ೧೩- ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಸಂಭವಿಸಿದ ಅತಿವೃಷ್ಠಿಯಿಂದ ಆಗಿರುವ ಅನಾಹುತಗಳಿಗೆ ಕೇಂದ್ರ ಸರ್ಕಾರದಿಂದ ಪಡೆಯಬಹುದಾದ ಅನುದಾನ ಮತ್ತು ಇತರೆ ನೆರವಿನ ಬಗ್ಗೆ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರುಗಳ ಸಭೆಯನ್ನು ಕರೆಯುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮನವಿ ಮಾಡಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಕಳೆದ ವರ್ಷ ೨೦೧೮ ರಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಠಿಯಿಂದ ಆಗಿರುವ ಅನಾಹುತಗಳಿಗೆ ಸಂಬಂಧಿಸಿದಂತೆ ಜಮೀನು, ಮನೆ ಮತ್ತು ಜಾನುವಾರುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಬಿಡುಗಡೆಯಾದ ಅನುದಾನದಲ್ಲಿ ಈಗಾಗಲೇ ಒದಗಿಸಿರುವ ಮೂಲಭೂತ ಸೌಕರ್ಯಗಳ ಹಾಗೂ ಮನೆಗಳ ಬಗ್ಗೆ ಮಾಹಿತಿ ನೀಡುವಂತೆಯೂ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಇದರ ಜತೆಗೆ ಪ್ರಗತಿಯಲ್ಲಿರುವ ಮೂಲಭೂತ ಸೌಕರ್ಯ ಹಾಗೂ ಮನೆ ನಿರ್ಮಾಣದ ಕಾಮಗಾರಿಗಳು ಯಾವ ಹಂತದಲ್ಲಿವೆ, ಎಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ, ಎಷ್ಟು ಜನ ಫಲಾನುಭವಿಗಳಿಗೆ ಮನೆ ಮತ್ತು ಪರಿಹಾರಗಳನ್ನು ಒದಗಿಸಲಾಗಿದೆ ಎಲ್ಲ ಪೂರ್ಣ ಮಾಹಿತಿಯನ್ನು ಒದಗಿಸುವಂತೆ ಅವರು ಪತ್ರದಲ್ಲಿ ಕೋರಿದ್ದಾರೆ.
ಈ ಸಂಬಂಧ ಕೇಂದ್ರ ಸರ್ಕಾರದಿಂದ ಪಡೆಯಬಹುದಾದ ಅನುದಾನ ಹಾಗೂ ಇತರೆ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚಿಸಲು ರಾಜ್ಯದ ಕೇಂದ್ರ ಸಚಿವರ ಸಭೆ ಕರೆಯಲು ದಿನಾಂಕವನ್ನೂ ಗೊತ್ತುಪಡಿಸುವಂತೆ ಕೇಂದ್ರ ಸಚಿವ ಸದಾನಂದಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ.

Leave a Comment