ಸಭೆಗೆ ಆಕ್ಟ್ ಬುಕ್ ತರಿಸಿ ಓದಿದ ಶಾಸಕರು

ಹುಳಿಯಾರು,ಜ. ೧೨- ಜಿಲ್ಲೆಯಲ್ಲಿಯೇ ಅತಿ ದೊಡ್ಡ ಗ್ರಾಮ ಪಂಚಾಯ್ತಿಯಾಗಿ ಸದಾ ಸುದ್ದಿಯಲ್ಲಿದ್ದ ಹುಳಿಯಾರು ಪಂಚಾಯಿತಿ ಇದೀಗ ಉನ್ನತೀಕರಣಗೊಂಡ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿಯಾಗಿತ್ತು.

ಆದರೆ ಇನ್ನೂ ಅಧಿಕಾರಾವಧಿ ಉಳಿದಿದ್ದ ಗ್ರಾ.ಪಂ. ಸದಸ್ಯರುಗಳು ಪ.ಪಂ. ಸದಸ್ಯರಾಗಿ ಮುಂದುವರಿಯುತ್ತಾರೋ ಇಲ್ಲವೋ ಎಂಬುದರ ಬಗ್ಗೆ ಸ್ವತಃ ಸದಸ್ಯರುಗಳಿಗೆ ಗೊಂದಲವಿತ್ತು. ಈ ವಿಚಾರ ಕಳೆದ ಹಲವಾರು ತಿಂಗಳಿನಿಂದ ಪಟ್ಟಣದಲ್ಲಿ ಸುದ್ದಿಯಾಗಿತ್ತು. ಇದರ ಗೊಂದಲ ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೇ ಖುದ್ದು ಪಂಚಾಯ್ತಿಗೆ ಆಗಮಿಸಿ ಸಭೆ ನಡೆಸಿದರು.

ನಿಕಟಪೂರ್ವದ ಗ್ರಾ.ಪಂ. ಸದಸ್ಯರುಗಳೇ ಪ.ಪಂ. ಸದಸ್ಯರಾಗುತ್ತಾರೋ ಇಲ್ಲವೋ ಎಂಬುದರ ಬಗ್ಗೆ ಇಲಾಖಾ ಮಟ್ಟದಲ್ಲಿ ಸಣ್ಣ ತಕರಾರು ವ್ಯಕ್ತವಾಗಿತ್ತು. ಆರಂಭದಲ್ಲಿ ಈ ಬಗ್ಗೆ ನಡೆದ ಚರ್ಚೆಯಲ್ಲಿ ಜಿಲ್ಲಾಧಿಕಾರಿಗಳು ಹಾಲಿ ಸದಸ್ಯರುಗಳೇ ತಾತ್ಕಾಲಿಕವಾಗಿ ಮುಂದುವರಿಯಲಿದ್ದಾರೆ ಎಂದು ವಿಶ್ಲೇಷಣೆ ಮಾಡಿದರು.

ಆದರೆ ಈ ಅವಧಿ ಎಲ್ಲಿಯವರೆವಿಗೆ ಮುಂದುವರಿದಿರುವ ಸದಸ್ಯರ ಕರ್ತವ್ಯಗಳೇನು ಎನ್ನುವ ಬಗ್ಗೆ ಕೆಲ ಸದಸ್ಯರು ಕ್ಲಾರಿಫಿಕೇಶನ್ ಕೇಳಿದರು. ಆಗ ಶಾಸಕ ಜೆ.ಸಿ. ಮಾಧುಸ್ವಾಮಿ ಅವರು ಸಭೆಗೆ ಆಕ್ಟ್ ಪುಸ್ತಕವನ್ನು ತರಿಸಿ ಕುಲಂಕುಶವಾಗಿ ಪರಿಶೀಲಿಸಿದರು. ನಂತರ ತಾವೇ ಪಂಚಾಯ್ತಿ ಆಕ್ಟ್ ಹಾಗೂ ಮುನ್ಸಿಫಲ್ ಆಕ್ಟ್ ಎರಡನ್ನು ಓದಿ ಸದಸ್ಯರಿಗೆ ಹೇಳಿದ್ದು ವಿಶೇಷವಾಗಿತ್ತು.

ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಭಾಗವಹಿಸಿದ ಹಾಗೂ ಪಟ್ಟಣ ಪಂಚಾಯಿತಿ ಆದ ನಂತರದ ಪ್ರಥಮ ಸಭೆ ಇದಾಗಿತ್ತು. ಸಭೆಯಲ್ಲಿ ಹುಳಿಯಾರು ಪಟ್ಟಣದ ಅಭಿವೃದ್ಧಿಯ ದೃಷ್ಟಿಯಿಂದ ಹಾಲಿ ಸದಸ್ಯರುಗಳನ್ನು ಮುನ್ಸಿಪಾಲ್ ಆಕ್ಟ್ ಪ್ರಕಾರ ಹಂಗಾಮಿ ಸದಸ್ಯರನ್ನಾಗಿ ಮುಂದುವರಿಸುತ್ತಿರುವುದಾಗಿ ಘೋಷಣೆ ಮಾಡಿದರು. ಇದಕ್ಕೆ ದನಿಗೂಡಿಸಿದ ಶಾಸಕರು ಪೈಪ್‌ಲೈನ್, ಚರಂಡಿ ಕಾಮಗಾರಿ ಅದು ಇದು ಎಂದು ಕಿತ್ತಾಡೋದು ಬಿಟ್ಟು ಊರಿನ ಅಭಿವೃದ್ಧಿಯತ್ತ ಗಮನ ಹರಿಸಿ ಎಂದು ಕಿವಿಮಾತು ಹೇಳಿದರು.

ಹಂಗಾಮಿ ಸದಸ್ಯರು
ಸದಸ್ಯರುಗಳ ಮುಂದುವರಿಕೆ ಬಗ್ಗೆ ಒಪ್ಪಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಸದ್ಯಕ್ಕವರು ಕೆಲವೊಂದು ನಿಯಮಾವಳಿಯ ಪ್ರಕಾರ ಗ್ರಾಮ ಪಂಚಾಯಿತಿ ಸದಸ್ಯರುಗಳು ಅಲ್ಲ, ಪಟ್ಟಣ ಪಂಚಾಯತಿ ಸದಸ್ಯರು ಅಲ್ಲಾ ಎಂದಾಗುತ್ತದೆ. ಅಭಿವೃದ್ಧಿಯ ಹಿತದೃಷ್ಟಿಯಿಂದ ಇವರುಗಳನ್ನು ಹಂಗಾಮಿ ಸದಸ್ಯರನ್ನಾಗಿ ಮುಂದುವರಿಸುತ್ತಿದ್ದು, ಮುಂದಿನ ಚುನಾವಣೆ ನಡೆದು ಪ್ರಥಮ ಕೌನ್ಸಿಲ್ ಸಭೆ ನಡೆಯುವವರೆಗೂ ಇವರ ಅವಧಿ ಮುಂದುವರಿಯುತ್ತದೆ ಎಂದು ಸ್ಪಷ್ಟನೆ ನೀಡಿದರು.

Leave a Comment