ಸಭಾಪತಿ ಸ್ಥಾನಕ್ಕೆ ದೋಸ್ತಿಗಳ ಪೈಪೋಟಿ

ಬೆಂಗಳೂರು, ಡಿ. ೬- ವಿಧಾನ ಪರಿಷತ್ತಿನ ಸಭಾಪತಿ ಸ್ಥಾನಕ್ಕೆ ದೋಸ್ತಿ ಪಕ್ಷಗಳಲ್ಲಿ ಜಟಾಪಟಿ ನಡೆದಿರುವ ಹಿನ್ನೆಲೆಯಲ್ಲಿ ಬೆಳಗಾವಿ ಅಧಿವೇಶನದಲ್ಲಿ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯುವ ಸಾಧ್ಯತೆಗಳು ಕಡಿಮೆ ಇದ್ದು, ಹಂಗಾಮಿ ಸಭಾಪತಿ ಬಸವರಾಜು ಹೊರಟ್ಟಿರವರೆ ಸಭಾಪತಿಯಾಗಿ ಕಾರ್ಯಭಾರ ನಿರ್ವಹಿಸಲಿದ್ದಾರೆ.
ನಿನ್ನೆ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಸಭಾಪತಿ ಸ್ಥಾನದ ಬಗ್ಗೆ ಚರ್ಚೆ ನಡೆದಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳೆರಡೂ ಸಭಾಪತಿ ಸ್ಥಾನವನ್ನು ತಮಗೆ ನೀಡುವಂತೆ ಪಟ್ಟು ಹಿಡಿದಿದ್ದರಿಂದ ಸಭಾಪತಿ ಸ್ಥಾನ ಯಾವ ಪಕ್ಷಕ್ಕೆ ಸಿಗಬೇಕು ಎಂಬ ಬಗ್ಗೆ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ.
ಈ ತಿಂಗಳ 10 ರಂದು ಆರಂಭವಾಗಲಿರುವ ಅಧಿವೇಶನದಲ್ಲಿ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಆದರೆ ದೋಸ್ತಿ ಪಕ್ಷಗಳಲ್ಲಿ ಒಮ್ಮತ ಮೂಡದ ಕಾರಣ ಈ ಅಧಿವೇಶನದಲ್ಲಿ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಕಡಿಮೆ.
ಈಗ ಹಂಗಾಮಿ ಸಭಾಪತಿ ಆಗಿರುವ ಬಸವರಾಜು ಹೊರಟ್ಟಿರವರೆ ಸಭಾಪತಿಯ ಕಾರ್ಯಭಾರ ನೋಡಿಕೊಳ್ಳಲಿದ್ದಾರೆ.
ಸಮನ್ವಯ ಸಮಿತಿ ಸಭೆಯಲ್ಲಿ ಸಭಾಪತಿ ಸ್ಥಾನವನ್ನು ತಮಗೆ ಬಿಟ್ಟುಕೊಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಸ್ತಾಪ ಇಟ್ಟರಾದರೂ ಅದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ವಿರೋಧ ವ್ಯಕ್ತಪಡಿಸಿದರು ಎನ್ನಲಾಗಿದೆ.
ವಿಧಾನಸಭೆಯಲ್ಲಿ ಸಭಾಧ್ಯಕ್ಷ ಹುದ್ದೆಯನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿದ್ದೇವೆ. ಹಾಗಾಗಿ ವಿಧಾನ ಪರಿಷತ್ತಿನಲ್ಲಿ ಜೆಡಿಎಸ್ ಪಕ್ಷಕ್ಕೆ ಸಭಾಪತಿ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಪಟ್ಟು ಹಿಡಿದರಾದರೂ ಅದಕ್ಕೆ ಕಾಂಗ್ರೆಸ್ ನಾಯಕರು ಒಪ್ಪಲಿಲ್ಲ. ಹಾಗಾಗಿ ಸಭಾಪತಿ ಆಯ್ಕೆ ನೆನೆಗುದಿಗೆ ಬಿದ್ದಂತಾಗಿದೆ.
ಈಗ ಹಂಗಾಮಿ ಸಭಾಪತಿ ಆಗಿರುವ ಜೆಡಿಎಸ್‌ನ ಬಸವರಾಜು ಹೊರಟ್ಟಿಯವರನ್ನೆ ಸಭಾಪತಿಯನ್ನಾಗಿ ಆಯ್ಕೆ ಮಾಡಲು ಮಾಜಿ ಪ್ರಧಾನಿ ದೇವೇಗೌಡರು ತೀರ್ಮಾನಿಸಿದ್ದರು. ರಾಜ್ಯ ಕಾಂಗ್ರೆಸ್ ನಾಯಕರು ಸಭಾಪತಿ ಸ್ಥಾನವನ್ನು ಬಿಟ್ಟು ಕೊಡಲು ಒಪ್ಪದ ಕಾರಣ ಬಸವರಾಜು ಹೊರಟ್ಟಿ ಅವರ ಸಭಾಪತಿ ಆಯ್ಕೆ ಈ ಅಧಿವೇಶನದಲ್ಲಿ ನಡೆಯುವ ಸಾಧ್ಯತೆಗಳು ಇಲ್ಲ.
ಸಭಾಪತಿ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿಯವರ ಜತೆ ಮಾತನಾಡಲು ಜೆಡಿಎಸ್ ನಾಯಕರು ನಿರ್ಧರಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ನ್ನು ಒಪ್ಪಿಸಿ ಸಭಾಪತಿ ಸ್ಥಾನವನ್ನು ಪಡೆಯುವ ಚಿಂತನೆ ಜೆಡಿಎಸ್ ನಾಯಕರದ್ದಾಗಿದೆ.
ವಿಧಾನ ಪರಿಷತ್ತಿನ ಸಭಾಪತಿ ಸ್ಥಾನ ನಮಗೆ ಸಿಗಬೇಕು ಎಂದು ರಾಜ್ಯ ಕಾಂಗ್ರೆಸ್ ನಾಯಕರು ಬಿಗಿಪಟ್ಟು ಹಿಡಿದಿದ್ದು, ಅದರಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಎಸ್.ಆರ್. ಪಾಟೀಲ್ ಅವರನ್ನು ಸಭಾಪತಿಯನ್ನಾಗಿಸಲು ಪ್ರಯತ್ನ ನಡೆಸಿದ್ದಾರೆ.
ಸಭಾಪತಿ ಸ್ಥಾನದ ಆಯ್ಕೆ ವಿಚಾರ ಈಗ ದೋಸ್ತಿ ಪಕ್ಷಗಳಲ್ಲಿ ಜಟಾಪಟಿಗೆ ಕಾರಣವಾಗಿದೆ.

Leave a Comment