ಸಬ್‌ಜೈಲಿನ ಮುಂದೆಯೇ ಎರಡು ತಂಡಗಳ ಮಾರಾಮಾರಿ

ಹುಬ್ಬಳ್ಳಿ,ಜೂ 19- ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದ ಘಟನೆ ನಗರದ ಸಬ್‌ಜೈಲ್ ಬಳಿ ಇಂದು ಮದ್ಯಾಹ್ನ ಜರುಗಿದೆ.
ಕಳೆದ ವಾರ ನೇಕಾರನಗರದಲ್ಲಿ ಜರುಗಿದ ಚೂರಿ ಇರಿತ ಪ್ರಕರಣದಲ್ಲಿ ಬಂಧಿತನಾಗಿ ಸಬ್‌ಜೈಲ್ ಸೇರಿದ್ದ ಸೂರಿ ಮತ್ತು ತಂಡದ ಮೇಲೆ ಮತ್ತೊಂದು ತಂಡ ಇಂದು ಮಧ್ಯಾಹ್ನ ಹಲ್ಲೆ ನಡೆಸಲು ಯತ್ನ ನಡೆಸಿದಾಗ ಎರಡೂ ಗುಂಪುಗಳ ಮಧ್ಯೆ ಮಾರಾಮಾರಿ ಸಂಭವಿಸಿದೆ.
ಕಳೆದ ವಾರ ಸೆಟ್ಲಮೆಂಟ್ ನಿವಾಸಿ ಹುಸೇನ ಬಿಜಾಪುರ ಎಂಬುವನ ಮೇಲೆ ಸೂರಿ ಮತ್ತು ತಂಡ ಹಲ್ಲೆ ನಡೆಸಿ, ಚೂರಿ ಇರಿದು ಪರಾರಿಯಾಗಿದ್ದರು.
ನಂತರ ಅವರನ್ನು ಬಂಧಿಸಿದ ಪೊಲೀಸರು ನ್ಯಾಯಾಂಗದ ಆದೇಶದಂತೆ ಸಬ್‌ಜೈಲಿನಲ್ಲಿ ಇರಿಸಿದ್ದರು. ಆದರೆ ಕೋರ್ಟ್‌ನಿಂದ ಜಾಮೀನು ಪಡೆದ ಸೂರಿ ಮತ್ತು ಆತನ ಸಹಚರರು ಇಂದು ಸಬ್‌ಜೈಲಿನಿಂದ ಹೊರಬರುತ್ತಿರುವಾಗ ಮತ್ತೊಂದು ತಂಡ ಹಲ್ಲೆ ನಡೆಸಲು ಯತ್ನಿಸಿದಾಗ ಈ ಮಾರಾಮಾರಿ ಸಂಭವಿಸಿದೆ.
ಸ್ಥಳದಲ್ಲಿದ್ದ ಸಬ್‌ಜೈಲಿನ ಸಿಬ್ಬಂದಿ ಎರಡೂ ತಂಡಗಳನ್ನು ವಶಕ್ಕೆ ತೆಗೆದುಕೊಂಡು ಪರಿಸ್ಥಿತಿಯನ್ನು ತಿಳಿಗೊಳಿಸಿದರೆಂದು ತಿಳಿದು ಬಂದಿದೆ.

Leave a Comment